ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಖ್ಯಾತ ಬರಹಗಾರ ಸಲೀಂ ಖಾನ್ ಅವರಿಗೆ ಮತ್ತೆ ಪ್ರಾಣ ಬೆದರಿಕೆ ಹಾಕಲಾಗಿದೆ. ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದ್ದು ಸಲೀಂ ಖಾನ್ ಅವರು ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ಮಹಿಳೆಯೊಬ್ಬರು ಅವರಿಗೆ ಬೆದರಿಕೆ ಪತ್ರ ನೀಡಿದ್ದಾರೆ. ‘ಲಾರೆನ್ಸ್ ಬಿಷ್ಣೋಯ್ ಅವರನ್ನು ಕಳುಹಿಸಬೇಕೇ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪ್ರಕರಣದ ಸಂಬಂಧ ಅಪರಿಚಿತ ಮಹಿಳೆಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಅಪರಿಚಿತ ಮಹಿಳೆಯಿಂದ ಸಲೀಂ ಖಾನ್ಗೆ ಬೆದರಿಕೆ ಬಂದಿದ್ದು ಇದೇ ಮೊದಲು. ಹಾಗಾಗಿ ಸಂಚಲನ ಸೃಷ್ಟಿ ಆಗಿದೆ. ಈ ಮಹಿಳೆ ಯಾರು? ಅವರು ಎಲ್ಲಿಂದ ಬಂದಿದ್ದರು? ಅವರು ನಿಜಕ್ಕೂ ಬಿಷ್ಣೋಯ್ ಗ್ಯಾಂಗ್ನವರಾ ಎನ್ನುವ ಪ್ರಶ್ನೆಗಳು ಈ ಸಂದರ್ಭದಲ್ಲಿ ಎದ್ದಿವೆ. ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿರುವ ಸಲ್ಮಾನ್ ಮನೆಯ ಗೋಡೆಗೆ ಇಬ್ಬರು ಯುವಕರು ಗುಂಡಿನ ದಾಳಿ ನಡೆಸಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಜೂನ್ನಲ್ಲಿ ಸಲ್ಮಾನ್ ಖಾನ್ ಮತ್ತು ಸಲೀಂ ಖಾನ್ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಸಲೀಂ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದಾಗ್ಯೂ ಈ ರೀತಿಯ ಈ ಬೆದರಿಕೆ ಪತ್ರ ಬರುತ್ತಿದೆ.