ಬೆಂಗಳೂರು: ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಶುರು ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಅಷ್ಟಕ್ಕೆ ಅಷ್ಟೇ ಆಗಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ಗೆ ಹೊಸ ರೂಪ ನೀಡೋದಾಗಿ ಹೇಳಿದೆ.
ಆದ್ರೇ ಇರೋ ಕ್ಯಾಂಟೀನ್ ಒಂದಕ್ಕೆ ಬೀಗ ಬಿದ್ದಿದ್ದು, ಆ ಕ್ಯಾಂಟೀನ್ ಅಕ್ರಮ ಚಟುವಟಿಕೆಯ ತಾಣವಾಗಿದೆ.
ಹೊಸ ರೂಪದಲ್ಲಿ ಇಂದಿರಾ ಕ್ಯಾಂಟೀನ್ ಇರುತ್ತೆ.. ಬಡವರ ಹಸಿವು ನೀಗಿಸುತ್ತೆ, ಹೊಸ ಮೆನು ಇರುತ್ತೆ ಅಂತಾ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದ್ರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳದ್ರೂ ಇನ್ನೂ ಹೊಸ ಮೆನು ಬಂದೇ ಇಲ್ಲ. ಅದ್ರಲ್ಲಿ ಕಳೆದ ಅವಧಿಯಲ್ಲಿ ನಿರ್ಮಾಣವಾಗಿದ್ದ ವಾರ್ಡ್ ನಂಬರ್ 155ರ ಹನುಮಂತನಗರದ ಇಂದಿರಾ ಕ್ಯಾಂಟೀನ್ ಅಕ್ಷರಶಃ ಪಾಳು ಬಿದ್ದ ಜಾಗದಂತೆ ಆಗಿದ್ದು, ಕ್ಯಾಂಟೀನ್ ಆವರಣದಲ್ಲಿ ಗಿಡಗಂಟೆಗಳು ಬೆಳೆದುಕೊಂಡಿದೆ.
ಕ್ಯಾಂಟೀನ್ ಕೂಡ ಕ್ಲೋಸ್ ಆಗಿದ್ದು ಇದು ಪೋಲಿ, ಪುಂಡರ ಅಡ್ಡೆಯಾಗಿ ಮಾರ್ಪಾಡಾಗಿದ್ದು, ಅನೈತಿಕ ಚಟುವಟಿಕೆಗಳ ಸ್ಥಳವಾಗಿದೆ. ಅಲ್ಲದೇ ಕ್ಯಾಂಟೀನ್ ಮುಂದೆಯೇ ಇಂದಿರಾ ಮೊಬೈಲ್ ಕ್ಯಾಂಟೀನ್ನ ಟಿಟಿ ವಾಹನ ಕೂಡ ಕೆಟ್ಟು ನಿಂತು ವರ್ಷಗಳೇ ಕಳೆದಿವೆ, ಇಡೀ ವಾಹನ ಗಬ್ಬೆದ್ದು ನಾರುತ್ತಿದೆ.
ಟಿಟಿ ವಾಹನ ಕೂಡ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ನಡೆಯಬಾರದ ಘಟನೆಗಳು ನಡೆಯುತ್ತಿರೋವಂತೆ ಆಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಉಳಿದ ಇಂದಿರಾ ಕ್ಯಾಂಟೀನ್ಗಳ ಬಗ್ಗೆ ನಿಗಾ ವಹಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.