ಮನೆಯಲ್ಲಿ ಬಳಸುವ ವಿವಿಧ ಬಗೆಯ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು. ಕೆಲವೊಂದು ಸಿಹಿ ಪದಾರ್ಥಗಳಲ್ಲಿ ಕಡ್ಡಾಯವಾಗಿ ಲವಂಗಗಳನ್ನು ಹಾಕಲಾಗುತ್ತದೆ. ಅದೇ ರೀತಿ ಮಸಾಲೆ ಹೊಂದಿರುವ ಅಡುಗೆಗಳಲ್ಲಿ ಲವಂಗ ಇದ್ದೇ ಇರುತ್ತದೆ. ಅಪಾರವಾದ ವಿಟಮಿನ್ ಅಂಶಗಳು, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿರುವ ಲವಂಗ ನಮಗೆ ವಿಧವಿಧವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಲವಂಗಗಳನ್ನು ನೀರಿನಲ್ಲಿ ನೆನೆ ಹಾಕುವುದರಿಂದ ಅವುಗಳ ರುಚಿ ಹೆಚ್ಚಾಗುತ್ತದೆ ಮತ್ತು ಅವುಗಳಿಂದ ಪೂರ್ಣ ಪ್ರಮಾಣದಲ್ಲಿ ನಾವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು.
ಲವಂಗಗಳು ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳನ್ನು ನಾಶಪಡಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇವು ನಮ್ಮ ಆಕ್ಸಿಡೆಟಿವ್ ಒತ್ತಡವನ್ನು ದೂರ ಮಾಡುವುದರ ಜೊತೆಗೆ ನಮ್ಮ ಜೀವಕೋಶಗಳನ್ನು ಹಾನಿಯಾಗುವುದರಿಂದ ರಕ್ಷಿಸುತ್ತವೆ
ಲವಂಗಗಳು ನಮ್ಮ ದೇಹದ ಉರಿಯುತವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತವೆ. ನಮ್ಮ ಮೂಳೆಗಳಿಗೆ ಸಂಬಂಧಪಟ್ಟಂತೆ ಕಂಡುಬರುವ ಆರ್ಥ್ರೈಟಿಸ್ ಮತ್ತು ವಿವಿಧ ಬಗೆಯ ಕೀಲು ಹಾಗೂ ಮಾಂಸ ಖಂಡಗಳ ನೋವನ್ನು ಗುಣಪಡಿಸುವಲ್ಲಿ ನೆರವಿಗೆ ಬರುತ್ತವೆ.
ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕರವಾದ ಲಕ್ಷಣಗಳು ಲವಂಗಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಜೀರ್ಣತೆ ಇಂತಹ ಸಮಸ್ಯೆಗಳಿಗೆ ರಾಮಬಾಣವಾಗಿ ಲವಂಗಗಳು ಕೆಲಸ ಮಾಡುತ್ತವೆ. ನೀರಿನಲ್ಲಿ ನೆನೆ ಹಾಕಿ ಸೇವನೆ ಮಾಡುವುದರಿಂದ ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆ ನಮ್ಮದಾಗುತ್ತದೆ.
ಲವಂಗಗಳನ್ನು ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ವಿವಿಧ ಬಗೆಯ ಸೋಂಕುಗಳನ್ನು ಕಡಿಮೆ ಮಾಡಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.