ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ ವಿಜಯ್ ದೇವರಕೊಂಡ ಈಗ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಸ್ಟಾರ್ ನಟನಾಗಿ ಬೆಳೆದರು. ಆದರೆ ವಿಜಯ್ ದೇವರಕೊಂಡ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಸಾಕಷ್ಟು ಸಮಸ್ಯೆ ಎದುರಿಸಿದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಆರಂಭದ ದಿನಗಳನ್ನು ವಿಜಯ್ ನೆನಪು ಮಾಡಿಕೊಂಡಿದ್ದಾರೆ.
ವಿಜಯ್ ಮೊದಲು ನಟನೆ ಆರಂಭಿಸಿದ್ದು ನಾಟಕಗಳಲ್ಲಿ. ನಾಟಕಗಳಿಂದ ಸಿನಿಮಾಕ್ಕೆ ಬರುವ ಯೋಜನೆ ಹಾಕಿಕೊಂಡು ನಟನೆ ಆರಂಭಿಸಿದರಂತೆ ವಿಜಯ್, ನಾಟಕಗಳಲ್ಲಿ ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ವಿಜಯ್ ನಾಟಕ ಮಾಡುವಾಗ, ಪ್ರತಿ ಬಾರಿಯೂ ಇತರೆ ನಾಟಕ ನಿರ್ದೇಶಕರುಗಳು ತಮ್ಮ ಮುಂದಿನ ನಾಟಕದಲ್ಲಿ ನಟಿಸುವಂತೆ ವಿಜಯ್ ಬಳಿ ಕೇಳಿಕೊಳ್ಳುತ್ತಿದ್ದರಂತೆ. ಅದನ್ನು ಗಮನಿಸಿದ ವಿಜಯ್ ಗೆ ಸಿನಿಮಾಗಳಿಗೆ ಕಾಲಿಟ್ಟಾಗಲೂ ಇದೇ ಪರಿಸ್ಥಿತಿ ಇರುತ್ತದೆ ಎಂದುಕೊಂಡಿದ್ದರಂತೆ. ಆದರೆ ಅದು ಉಲ್ಟಾ ಹೊಡೆದಿದೆ.
ಸಿನಿಮಾಗಳಲ್ಲಿ ನಟಿಸಲು ನಿರ್ಧರಿಸಿದಾಗ ಯಾರೂ ಅವಕಾಶ ನೀಡಲಿಲ್ಲವಂತೆ. ಆಡಿಷನ್ ಗಳ ಮೇಲೆ ಆಡಿಷನ್ ಅಟೆಂಡ್ ಮಾಡಿದರು ಸಹ ಯಾರು ಅವಕಾಶ ಕೊಡಲಿಲ್ಲವಂತೆ. ಪ್ರತಿದಿನ ಬೆಳಿಗ್ಗೆ ಏಳುವುದು ಎಲ್ಲಿ ಆಡಿಷನ್ ಇದೆ ಎಂದು ನೋಡಿ ಹೋಗಿ ಆಡಿಷನ್ ಕೊಡುವುದು ಇದೇ ವಿಜಯ್ ಕೆಲಸವಾಗಿತ್ತಂತೆ. ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ಪೋಷಕ ಪಾತ್ರದಲ್ಲಿ ನಟಿಸಿದರಾದರೂ ಆ ನಂತರ ಒಂದು ವರ್ಷ ಯಾವ ಸಿನಿಮಾದಲ್ಲಿಯೂ ಅವಕಾಶವೇ ಸಿಗಲಿಲ್ಲವಂತೆ.
ಕೊನೆಗೆ ವಿಜಯ್ ಹಾಗೂ ಇತರ ಗೆಳೆಯರೆಲ್ಲ ಸೇರಿ, ಇನ್ನಷ್ಟು ಜನ ಹೂಡಿಕೆದಾರರನ್ನು ಸೇರಿಸಿಕೊಂಡು 60 ಲಕ್ಷ ರೂಪಾಯಿ ಹಣ ಹೊಂದಿಸಿ ‘ಪೆಳ್ಳಿ ಚೂಪುಲು’ ಸಿನಿಮಾ ಮಾಡಿದ್ದಾರೆ. ಸಿನಿಮಾ ಸಾಧಾರಣ ಯಶಸ್ಸು ಕಂಡಿದ್ದು ಮಾತ್ರವೇ ಅಲ್ಲದೆ ಸಿನಿಮಾದ ನಟನೆಗೆ ವಿಜಯ್’ಗೆ ರಾಷ್ಟ್ರಪ್ರಶಸ್ತಿ ಸಹ ದೊರೆಯಿತು. ಹಾಗಿದ್ದರೂ ಸಹ ವಿಜಯ್ ಅನ್ನು ಯಾರೂ ಸಿನಿಮಾಕ್ಕೆ ಹಾಕಿಕೊಳ್ಳಲಿಲ್ಲವಂತೆ. ಆದರೆ ಆ ಬಳಿಕ ಬಂದ ಅರ್ಜುನ್ ರೆಡ್ಡಿ ಸಿನಿಮಾ ವಿಜಯ್ ದೇವರಕೊಂಡ ಅವರ ಬದುಕನ್ನೇ ಬದಲಾಯಿಸಿತ್ತು.
‘ಅರ್ಜುನ್ ರೆಡ್ಡಿ’ ಸಿನಿಮಾದ ಬಳಿಕ ವಿಜಯ್ ಗೆ ಸಾಲು ಸಾಲಯ ಅವಕಾಶಗಳು ದೊರೆತವು. ‘ಗೀತ ಗೋವಿಂದಂ’ ದೊಡ್ಡ ಹಿಟ್ ಆಯ್ತು. ‘ಡಿಯರ್ ಕಾಮ್ರೆಡ್’ ಇನ್ನೂ ಹಲವು ಸಿನಿಮಾಗಳು ವಿಜಯ್ ಗೆ ಸಿಕ್ಕು ಸ್ಟಾರ್ ನಟ ಎನಿಸಿಕೊಂಡರು. ಸದ್ಯ ವಿಜಯ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು ತೆಲುಗು ಚಿತ್ರರಂಗದ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.