ಇತ್ತೀಚಿಗೆ ಮಕ್ಕಳಲ್ಲಿ ಹೃದಯಾಘಾತವಾಗುತ್ತಿರುವ ವಿದ್ರಾವಕ ಘಟನೆಗಳು ನಡೆಯುತ್ತಲೇ ಇವೆ. ದಿನಕಳೆದಂತೆ ಹೃದಯಾಘಾತಗಳು ಹೆಚ್ಚಾಗುತ್ತಲೇ ಇದ್ದು, ರಾಜ್ಯದಲ್ಲಿ ಇತ್ತೀಚಿಗೆ ಹೃದಯಾಘಾತದಿಂದ ಮಕ್ಕಳು ಸಾವನ್ನಪ್ಪಿರುವ ಕೆಲವು ಘಟನೆಗಳ ಕುರಿತು ಮಾಹಿತಿ ಇಲ್ಲಿದೆ
ಹಾಸನ:
11 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಸಚಿನ್ ಎಂದು ಗುರುತಿಸಲಾಗಿದೆ. ಗ್ರಾಮದ ಕಾವ್ಯಶ್ರೀ ಎಂಬುವವರ ಮಗ ಸಚಿನ್ ಎಂದು ತಿಳಿಯಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಶುಕ್ರವಾರ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿರುವರಿಂದ ಶಾಲೆಗೆ ಹೋಗದೇ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ. ಅದೇ ವೇಳೆ ಏಕಾಏಕಿ ಮತ್ತೇ ನೋವು ಕಾಣಿಸಿಕೊಂಡಿದೆ. ಇದ್ದ ಜಾಗದಲ್ಲಿಯೇ ಸಚಿನ್ ಕೊನೆಯುಸಿರೆಳೆದಿದ್ದಾನೆ.
ರಾಯಚೂರು:
9 ವರ್ಷದ ಬಾಲಕ ಕಡಿಮೆ ರಕ್ತದೊತ್ತಡದಿಂದ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ನಿವಾಸಿ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಗ್ರಾಮದ ಶಿವಣ್ಣ ವಕೀಲ್ ಎಂಬುವವರ ಮಗ ಶಿವಪ್ರಸಾದ್ ಎಂದು ತಿಳಿಯಲಾಗಿದೆ. 5ನೇ ತರಗತಿಯಲ್ಲಿ ಓದುತ್ತಿದ್ದ ಶಿವಪ್ರಸಾದ್ ತರಗತಿಯಲ್ಲಿಯೇ ಲೋಬಿಪಿಯಿಂದ ಅಸ್ವಸ್ಥನಾಗಿದ್ದಾನೆ. ಬಳಿಕ ಅಲ್ಲಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಯಾದಗಿರಿ:
ಪರೀಕ್ಷೆ ಬರೆಯುತ್ತಿರುವಾಗ 16 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನ ಕರ್ಕಳ್ಳಿ ತಾಂಡಾದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಚೇತನಕುಮಾರ್ ರಾಠೋಡ್ ಎಂದು ಗುರುತಿಸಲಾಗಿದೆ. ಶಹಾಪೂರ ನಗರದ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ವಿದ್ಯಾರ್ಥಿ ಚೇತನಕುಮಾರ್ ರಾಠೋಡ ಸಾವಿಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿಗೆ ವಿದ್ಯಾರ್ಥಿಯ ಸಾವಿನ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ ಅವರಿಂದ ಘಟನೆಯ ವರದಿ ಸಲ್ಲಿಸಲಾಗಿದೆ.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ವಿಚಾರಣೆ ಮಾಡಿದ್ದು, ಆರೋಗ್ಯ ಸಂಬಂಧಿ ಸಮಸ್ಯೆಯಿಂದ ವಿದ್ಯಾರ್ಥಿ ಹಠಾತ್ ನಿಧನ ಹೊಂದಿದ್ದಾನೆ. ಸ್ಪಂದನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾದ 15 ನಿಮಿಷದಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆಂದು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಲಿಖಿತ ಹೇಳಿಕೆಯೊಂದಿಗೆ ವರದಿ ಸಲ್ಲಿಸಲಾಗಿದ್ದು, ಶಾಲಾ ಅವಧಿಯಲ್ಲಿ ನಿತ್ರಾಣ ಹಾಗೂ ಲೋ ಬಿಪಿಯಿಂದ ಮರಣ ಹೊಂದಿದ್ದಾನೆ ಮಾಹಿತಿಯ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಸಿಎಂ ಕರ್ತವ್ಯಾಧಿಕಾರಿಯಿಂದ ಸರ್ಕಾರದ ಸ್ಪಂದನೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.