ಹುಬ್ಬಳ್ಳಿ: ರಾಜ್ಯದಲ್ಲಿ ಆಗುವ ಎಲ್ಲ ಕೋಮು ಗಲಭೆಗಳಿಗೆ ಬಿಜೆಪಿಯೇ ನೇರ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಕೋಮು ಗಲಭೆ ಅವರೇ ಮಾಡುವಂಥದ್ದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.
ಹುಬ್ಬಳ್ಳಿಯಲ್ಲಿರುವ ಸರ್ ಸಿದ್ದಪ್ಪ ಕಂಬಳಿ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಶನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಭಾವನೆ ಹೇಗೆ ಕೆರಳಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಜನರ ಬಳಿ ಹೋಗಲು ಅವರಲ್ಲಿ ಯಾವುದೇ ಸಾಧನೆ ಇಲ್ಲ. ರಾಜ್ಯ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿರುವುದನ್ನು ಸಹಿಸಲು ಆಗದೇ ಹೊಟ್ಟೆಕಿಚ್ಚಿನಿಂದ ಜಾತಿ ಜಾತಿ, ಧರ್ಮ ಧರ್ಮ ಗಳ ನಡುವೆ ವೈಷಮ್ಯ, ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜಭವನದ ಗೌಪ್ಯ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ರಾಜ್ಯಪಾಲರೇ ಉತ್ತರ ಕೊಡಬೇಕು. ರಾಜಭವನದ ಅಧಿಕಾರಿಗಳು ರಾಜ್ಯಪಾಲರ ನಿಯಂತ್ರಣದಲ್ಲಿ ಇರುತ್ತಾರೆ. ಅಲ್ಲಿ ಯಾರ ಇರಬೇಕು, ಅಧಿಕಾರಿಗಳು ಯಾರು ಬೇಕು ಎಂಬುದನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅರಣ್ಯ ಅತಿಕ್ರಮಣವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 3 ಎಕರೆಗಿಂತ ಕಡಿಮೆ ಅರಣ್ಯ ಪ್ರದೇಶ ಅತಿಕ್ರಮಣ ಮಾಡಿರುವ ಬಡವರು, ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಯಾರೂ ದೊಡ್ಡ ಪ್ರಮಾಣದಲ್ಲಿ ಅರಣ್ಯ ಅತಿಕ್ರಮಣ ಹಾಗೂ ನಾಶ ಮಾಡಿದ್ದಾರೆಯೋ ಅಥವರ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಎಂದರು.
ತಿರುಪತಿ ಲಡ್ಡು ವಿಚಾರದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಜಗಮೋಹನ್ ರೆಡ್ಡಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ನನಗೆ ಗೊತ್ತಿಲ್ಲ.ಹಾಗಾಗಿ ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
ರಾಜರಾರಣದಲ್ಲಿ ಇರುವರು ಜನರ ಸೇವೆ ಮಾಡಬೇಕು. ಅದನ್ನು ಬಿಟ್ಟು ಜನರನ್ನು ಶೋಷಣೆ ಮಾಡುವುದು, ಬ್ಲ್ಯಾಕ್ ಮೇಲ್ ಮಾಡುವುದು ಮಹಾದ್ರೋಹ. ಶಾಸಕ ಮುನಿರತ್ನ ಅವರಂಥವರು ರಾಜಕೀಯ ಜೀವನದಲ್ಲಿ ಇರಲು ಲಾಯಕ್ ಇಲ್ಲ ಎಂದರು.