ನಾವು ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ದೇಶದ ಯಾವ ಲ್ಯಾಬ್ನಲ್ಲಾದರೂ ಪರೀಕ್ಷೆ ಮಾಡಲಿ ಎಂದು ಕೆಎಂಎಫ್ ಎಂಡಿ ಜಗದೀಶ್ ಹೇಳಿದ್ದಾರೆ.
ತಿರುಮಲ ತಿರುಪತಿ ದೇವಾಲಯ ಲಡ್ಡು ವಿವಾದದ ಕುರಿತು ‘ಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ರೈತರಿಂದ ನೇರವಾಗಿ ಹಾಲು ಖರೀದಿಸಿ, ರೈತರ ಪರವಾಗಿ ಕೆಲಸ ಮಾಡುವ ಸಂಸ್ಥೆ ನಮ್ಮದು. ಇಡೀ ದೇಶದಲ್ಲೇ ಅತ್ಯುತ್ತಮ ಲ್ಯಾಬ್ ವ್ಯವಸ್ಥೆ ಇರೋದು ನಮ್ಮಲ್ಲಿಯೇ. ಎನ್ಎಬಿಎಲ್ನಿಂದ ಮಾನ್ಯತೆ ಪಡೆದಿರೋ ಏಕೈಕ ಲ್ಯಾಬ್ ನಮ್ಮ ಕೆಎಂಎಫ್ ಸಂಸ್ಥೆಯಲ್ಲಿದೆ. ನಮ್ಮ ಲ್ಯಾಬ್ನಲ್ಲೇ ಟೆಸ್ಟ್ ಮಾಡುವ ಸೌಲಭ್ಯವಿದೆ ಎಂದರು.
ನಾವು ಗುಣಮಟ್ಟದಲ್ಲಿ ರಾಜಿಯಾಗದೇ ಇರೋದಕ್ಕೆ ಕಾರಣವೇ ನಮ್ಮಲ್ಲಿರೋ ಸೌಲಭ್ಯ ಮತ್ತು ಸೌಕರ್ಯಗಳು. ಪ್ರತಿ ಹಂತದಲ್ಲೂ ಗುಣಮಟ್ಟದ ಪರೀಕ್ಷೆ ಮಾಡಿಯೇ ತುಪ್ಪದ ಉತ್ಪಾದನೆ ನಡೆಯಲಿದೆ. ಆಹಾರ ಗುಣಮಟ್ಟದ ಪರೀಕ್ಷೆಯನ್ನು ಮೈಸೂರು ಲ್ಯಾಬ್ನಲ್ಲಿ ಅಲ್ಲ ಯಾವುದೇ ಲ್ಯಾಬ್ನಲ್ಲಿ ಬೇಕಾದರೂ ಮಾಡಿಸಲಿ. ನಮ್ಮದು ಅತ್ಯುತ್ತಮ ಗುಣಮಟ್ಟದ ಪ್ರೊಡಕ್ಟ್ ಎಂದು ಹೇಳಿದರು.
ನಂದಿನಿ ತುಪ್ಪದ ದರದ ಬದಲಾವಣೆ ಮಾಡುವ ಯೋಚನೆ ಇಲ್ಲ. ತಿರುಮಲದಿಂದ ಮತ್ತೆ ನಮಗೆ ಟೆಂಡರ್ ನೀಡಿದ್ದಾರೆ. ಅವರು ಎಷ್ಟೇ ಬೇಡಿಕೆ ಇಟ್ಟರೂ ಅಷ್ಟು ಪ್ರಮಾಣದ ತುಪ್ಪವನ್ನು ಸರಬರಾಜು ಮಾಡುತ್ತೇವೆ. ಬೇಡಿಕೆ ಹೆಚ್ಚಾದರೂ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ತಿರುಮಲಕ್ಕೆ ಟ್ಯಾಂಕರ್ ಮೂಲಕ ತುಪ್ಪವನ್ನು ಕಳುಹಿಸಿಕೊಡಲಾಗುತ್ತದೆ. ಟ್ಯಾಂಕರ್ಗಟ್ಟಲೆ ತುಪ್ಪ ಕಳುಹಿಸುವುದರಿಂದ ಆ ತುಪ್ಪದ ಬೆಲೆ ಬೇರೆಯಾಗಿಯೇ ಇರುತ್ತದೆ ಎಂದು ತಿಳಿಸಿದರು.