ಮೈನೆ ಗಾಂಧಿ ಕೊ ನಹಿ ಮಾರಾ’, ‘ಮೈ ನೇಮ್ ಈಸ್ ಖಾನ್’, ‘ಖೋಸ್ಲಾ ಕಾ ಘೋಸ್ಲಾ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದ ನಟ ಕಂ ನಿರ್ದೇಶಕ ಪ್ರವೀಣ್ ದಬಾಸ್ ಚಲಾಯಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರವೀಣ್ ದಬಾಸ್ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಪ್ರವೀಣ್ ಚಲಾಯಿಸುತ್ತಿದ್ ದಕಾರು ಮುಂಬೈನ ಬಾಂದ್ರಾ ಬಳಿ ಅಪಘಾತಕ್ಕೆ ಒಳಗಾಗಿದೆ. ನಟ ಪ್ರವೀಣ್ ಅನ್ನು ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಪ್ರವೀಣ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರವೀಣ್ಗೆ ತೀವ್ರ ಗಾಯಗಳಾಗಿವೆ ಎನ್ನಲಾಗುತ್ತಿದ್ದು. ಪ್ರವೀಣ್ ಪತ್ನಿ, ನಟಿ ಪ್ರೀತಿ ಜಾಂಗಿಯಾನಿ ಸಹ ಆಸ್ಪತ್ರೆಯಲ್ಲಿಯೇ ಇದ್ದಾರೆ.
ಪ್ರವೀಣ್ ಪಂಜಾ ಪ್ರೋ ಲೀಗ್ನ ಸಹ ಸಂಸ್ಥಾಪಕರೂ ಸಹ ಆಗಿದ್ದರು. ವೆಬ್ ಸರಣಿಯೊಂದರ ನಿರ್ದೇಶಕರೂ ಆಗಿದ್ದಾರೆ. ಪ್ರವೀಣ್ಗೆ ಕಾರು ಅಪಘಾತವಾದ ಬೆನ್ನಲ್ಲೆ ಹೇಳಿಕೆ ಬಿಡುಗಡೆ ಮಾಡಿದ ಪ್ರೋ ಪಂಜಾ ಲೀಗ್, ‘ಪ್ರೊ ಪಂಜಾ ಲೀಗ್ನ ಸಹ-ಸಂಸ್ಥಾಪಕ ಪರ್ವಿನ್ ದಬಾಸ್ ಅವರು ಶನಿವಾರ ಮುಂಜಾನೆ ದುರದೃಷ್ಟವಷಾತ್ ಕಾರು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅವರನ್ನು ಬಾಂದ್ರಾ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ಘಟನೆಯ ವಿವರಗಳು ಇನ್ನೂ ಹೊರಬರಬೇಕಿದೆ, ಆದರೆ ಪ್ರವೀಣ್ ಅವರು ಚಿಕಿತ್ಸೆಗೆ ಸ್ಪಂದಿಸಿ ಆರೋಗ್ಯವಾಗಿ ಹೊರಬರಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದಿದ್ದರು.
ಪ್ರವೀಣ್ರ ಪತ್ನಿ ಪ್ರೀತಿ, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ನಾನು ಮತ್ತು ನನ್ನ ಕುಟುಂಬ ಇದೀಗ ಆಘಾತದಲ್ಲಿದ್ದು ಮಾತನಾಡಲು ಸಹ ಸಾಧ್ಯವಾಗುತ್ತಿಲ್ಲ. ಈವರೆಗೆ ಲಭಿಸಿರುವ ವೈದ್ಯಕೀಯ ಅಪ್ಡೇಟ್ ಏನೆಂದರೆ, ಅವರಿಗೆ ಗಂಭೀರವಾದ ಗಾಯಗಳಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮತ್ತು ಹೆಚ್ಚಿನ ಹಾನಿಯಾಗಿದೆಯೇ ಎಂದು ನೋಡಲು ವೈದ್ಯರು ಸಿಟಿ ಸ್ಕ್ಯಾನ್ ಮತ್ತು ಇತರ ಪರೀಕ್ಷೆಗಳನ್ನು ಮಾಡಿದ್ದಾರೆ. ಈಗ ಅವರು ಹೆಚ್ಚು ಚಲಿಸಲು ಸಾಧ್ಯವಿಲ್ಲ. ಪ್ರೋ ಪಂಜಾ ಲೀಗ್ನಲ್ಲಿ ಕೆಲಸದ ಹೊರೆ ಹೆಚ್ಚಾಗಿದ್ದರಿಂದ ರಾತ್ರಿ ಕೆಲಸ ಮಾಡುತ್ತಿದ್ದ ಅವರು ಮುಂಜಾನೆ ವಾಹನ ಚಲಾಯಿಸುವಾಗ ಅಪಘಾತಕ್ಕೀಡಾಗಿದ್ದಾರೆ’ ಎಂದಿದ್ದಾರೆ.
1999 ರಲ್ಲಿ ‘ದಿಲ್ಲಗಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ಪ್ರವೀಣ್, ಆ ನಂತರ ಹಲವು ದೊಡ್ಡ ಸಿನಿಮಾಗಳಲ್ಲಿ ನಟಿಸಿದರು. ‘ಮಾನ್ಸೂನ್ ವೆಡ್ಡಿಂಗ್’, ‘ದಿ ಹೀರೋ; ಸ್ಟೋರಿ ಆಫ್ ಸ್ಪೈ’, ಶಾರುಖ್ ಖಾನ್ ನಟನೆಯ ‘ಮೈ ನೇಮ್ ಈಸ್ ಖಾನ್’, ‘‘ಮೈನೆ ಗಾಂಧಿ ಕೊ ನಹಿ ಮಾರಾ’, ‘ರಾಗಿಣಿ ಎಂಎಂಎಸ್ 2’, ‘ಖೋಸ್ಲಾ ಕಾ ಘೋಸ್ಲಾ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದರು.