ಆಂಧ್ರ ಪ್ರದೇಶದಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದಿದ್ದು, ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾರೆ. ಸಿಎಂ ಆಗುವ ಮುನ್ನ ಮಾಡಿದ ಎಲ್ಲ ಕಾರ್ಯಕ್ರಮಗಳಿಂದಲೂ ಜೂ ಎನ್ಟಿಆರ್ ಅನ್ನು ದೂರ ಇಡಲಾಗಿತ್ತು. ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ರಾಜಕೀಯವಾಗಿ ಬೆಳೆಸಲೆಂದೇ ಜೂ ಎನ್ಟಿಆರ್ ಅನ್ನು ಪಕ್ಷದ ಹಾಗೂ ನಂದಮೂರಿ ಕುಟುಂಬದ ಕಾರ್ಯಕ್ರಮಗಳಿಂದ ದೂರ ಇಡಲಾಗಿದೆ. ಇದೀಗ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾಕ್ಕೆ ಕೆಲವು ರಿಯಾಯಿತಿಗಳನ್ನು ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ನೀಡಿದೆ.
‘ದೇವರ’ ಸಿನಿಮಾದ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಲು ಅನುಮತಿಯನ್ನು ರಾಜ್ಯ ಸರ್ಕಾರ ನೀಡಿದೆ. ಟಿಕೆಟ್ ದರ ಹೆಚ್ಚಿಸಲು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ರಾಜ್ಯ ಸರ್ಕಾರದ ಅನುಮತಿ ಬೇಕಾಗಿದೆ. ಕರ್ನಾಟಕದಲ್ಲಿ ಆ ರೀತಿಯ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ಇದರ ಜೊತೆಗೆ ಸಿನಿಮಾದ ಮಿಡ್ನೈಟ್ ಶೋ ಹಾಕಿಕೊಳ್ಳಲು, ಫ್ಯಾನ್ಸ್ ಶೋ ಹಾಕಿಕೊಳ್ಳಲು, ಅರ್ಲಿ ಮಾರ್ನಿಂಗ್ ಶೋ ಹಾಕಿಕೊಳ್ಳುವ ಅನುಮತಿಯನ್ನು ಆಂಧ್ರ ಸರ್ಕಾರ ನೀಡಿದೆ.
ಈ ಬಗ್ಗೆ ಟ್ವೀಟ್ ವಿತರಕ ನಾಗ ವಂಶಿ, ‘ಟಿಕೆಟ್ ದರ ಹೆಚ್ಚಳ, ಹೆಚ್ಚುವರಿ ಶೋಗಳ ಬಗ್ಗೆ ನಾವು ಮಾಡಿದ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಆಂಧ್ರ ಸರ್ಕಾರ, ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್, ಸಿನಿಮಾಟೊಗ್ರಫಿ ಮಂದಿ ಕಂಡುಲದುರ್ಗೇಶ್ ಅವರಿಗೆ ಧನ್ಯವಾದ. ನಿಮ್ಮ ಬೆಂಬಲದಿಂದ ನಾವು ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರಮಂದಿರ ಅನುಭವವನ್ನು ಕೊಡುವ ಸತತ ಪ್ರಯತ್ನ ಮಾಡುತ್ತೇವೆ. ‘ದೇವರ’ ಹಾವಳಿ ಸೆಪ್ಟೆಂಬರ್ 27ರಿಂದ ಪ್ರಾರಂಭ ಆಗಲಿದೆ’ ಎಂದಿದ್ದಾರೆ.
ಜಗನ್ ಆಡಳಿತವಿದ್ದಾಗ ಟಿಕೆಟ್ ಬೆಲೆಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿತ್ತು. ಚಿತ್ರಮಂದಿರಗಳ ಮೇಲೆ ತೆರಿಗೆ ಹೆಚ್ಚಿಸಲಾಗಿತ್ತು, ಕೆಲವು ಚಿತ್ರಮಂದಿರಗಳನ್ನು ಬಾಗಿಲು ಹಾಕಿಸಲಾಗಿತ್ತು. ಮಿಡ್ನೈಟ್ ಶೋ, ಫ್ಯಾನ್ಸ್ ಶೋಗಳನ್ನು ರದ್ದು ಮಾಡಲಾಗಿತ್ತು. ಇನ್ನೂ ಹಲವು ನಿಯಮಗಳನ್ನು ಹೇರಿ ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಲಾಗಿತ್ತು. ಇದನ್ನು ಚಿತ್ರರಂಗದವರು ವಿರೋಧಿಸಿದ್ದರು.