ಬೆಂಗಳೂರು :– ತಿಮ್ಮಪ್ಪನ ಲಡ್ಡು ವಿವಾದ ಬೆನ್ನಲ್ಲೇ ಅಲರ್ಟ್ ಆಗಿರುವ ಆರೋಗ್ಯ ಇಲಾಖೆ, ಕರ್ನಾಟಕದ ವಿವಿಧ ಕಂಪನಿಗಳಲ್ಲಿ ತುಪ್ಪ ಪರೀಕ್ಷಿಸಲು ನಿರ್ಧಾರ ಮಾಡಿದೆ.ಕರ್ನಾಟಕದಲ್ಲಿ ತಯಾರಾಗುವ ಮತ್ತು ಮಾರಾಟ ಮಾಡುತ್ತಿರುವ ವಿವಿಧ ಕಂಪನಿಯ ತುಪ್ಪಗಳನ್ನು ಪರೀಕ್ಷೆ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಆಹಾರ ಸುರಕ್ಷಿತ ಹಾಗೂ ಗುಣಮಟ್ಟ ಇಲಾಖೆಗೆ ಆದೇಶಿಸಿದ್ದಾರೆ.
ತ್ವರಿತಗತಿಯಲ್ಲಿ ವಿವಿಧ ಕಂಪನಿಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ವರದಿ ಬಂದ ಬಳಿಕ ಇವುಗಳಲ್ಲಿ ಕಲಬೆರಕೆ ಕಂಡು ಬಂದಲ್ಲಿ, ಕೂಡಲೇ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಸಚಿವರ ಆದೇಶ ಬೆನ್ನಲ್ಲೇ ವಿವಿಧ ಕಂಪನಿಗಳ ತುಪ್ಪದ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಜೊತೆಗೆ ರಾಜ್ಯದ ದೇವಸ್ಥಾನಗಳಲ್ಲಿ ತುಪ್ಪದಿಂದ ತಯಾರಾಗುವ ಪ್ರಸಾದಗಳ ಮಾದರಿಯನ್ನೂ ಆಹಾರ ಇಲಾಖೆ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ತಯಾರಿ ನಡೆಸಿದೆ.
ತಿರುಪತಿ ಲಡ್ಡುವಿಗೂ ಕೋಲಾರ ಹಾಲು ಒಕ್ಕೂಟಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ತಿರುಪತಿ ಲಡ್ಡುವಿನ ಸ್ವಾದದ ಹಿಂದೆ ಕೋಲಾರ ಹಾಲು ಒಕ್ಕೂಟದ ಶುದ್ದ ತುಪ್ಪದ ಗಮಲಿದೆ ಅನ್ನೋ ವಿಷಯ ಈಗ ಟಿಟಿಡಿ ಅಧಿಕಾರಿಗಳಿಗೂ ಮನವರಿಕೆಯಾಗಿದೆ.