ಬ್ರೆಜಿಲ್, ದಕ್ಷಿಣ ಅಮೇರಿಕಾ ಸೇರಿ ಇನ್ನೂ ಹಲವು ಕಡೆ ಭೀಕರ ಬರಗಾಲ ಎದುರಾಗಿದೆ. ಇದರಿಂದ ಜನ ತುತ್ತಿನ ಕೂಳಿಗೂ ಪರದಾಡುತ್ತಿದ್ದಾರೆ. ಮತ್ತೊಂದಡೆ ಜಲ ಮೂಲಗಳು ಬತ್ತಿ ಹೋಗುತ್ತವೆ. ಇದರಿಂದ ಜನ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಶ್ವದ ಅತಿದೊಡ್ಡ ನದಿ ಅನ್ನೋ ಹೆಗ್ಗಳಿಕೆ ಪಡೆದಿರುವ ಅಮೆಜಾನ್ ನದಿ ಬರಿದಾಗ್ತಿದೆ. ಅಮೆಜಾನ್ ನದಿಯ ಜಲಾನಯನ ಪ್ರದೇಶವು ಅತ್ಯಂತ ಕೆಟ್ಟ ಬರವನ್ನು ಅನುಭವಿಸುತ್ತಿದ್ದು, ಎಂದೂ ಕಂಡು ಕೇಳರಿಯದ ರೀತಿಯಲ್ಲಿ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ. ಈ ಪರಿಸರದ ಬಿಕ್ಕಟ್ಟು ವನ್ಯಜೀವಿಗಳು ಮತ್ತು ಸ್ಥಳೀಯ ಸಮುದಾಯಗಳ ಮೇಲೆ ವ್ಯಾಪಕವಾದ ಪರಿಣಾಮ ಬೀರುತ್ತಿದೆ ಮತ್ತು ಹವಾಮಾನ ಬದಲಾವಣೆಯ ವೇಗವರ್ಧಿತ ಪರಿಣಾಮಗಳ ಬಗ್ಗೆ ವಿಶ್ವಕ್ಕೆ ಎಚ್ಚರಿಕೆ ನೀಡುತ್ತಿದೆ.
ಪೆರುವಿನ ಆಂಡಿಸ್ ಪರ್ವತಗಳಿಂದ ಪೂರ್ವಕ್ಕೆ ದಕ್ಷಿಣ ಅಮೇರಿಕಾದಾದ್ಯಂತ ಅಟ್ಲಾಂಟಿಕ್ ಸಾಗರದವರೆಗೆ ಹರಿಯುವ ಅಮೆಜಾನ್ ನದಿಯು ಸಮುದ್ರ ಮಟ್ಟದಿಂದ 5,598 ಮೀಟರ್ಗಳಷ್ಟು ಎತ್ತರದಲ್ಲಿದೆ. ಋತುಮಾನದೊಂದಿಗೆ ನದಿಯ ಗಾತ್ರವು ಬದಲಾಗುತ್ತದೆ. ಉದಾಹರಣೆಗೆ ಶುಷ್ಕ ಋತುವಿನಲ್ಲಿ, ನದಿಯು 4 ರಿಂದ 5 ಕಿಮೀ ಅಗಲವನ್ನು ವ್ಯಾಪಿಸಿದರೆ, ಆರ್ದ್ರ ಋತುವಿನಲ್ಲಿ, ಇದು 50 ಕಿ.ಮೀ. ಅಗಲವಿರುತ್ತದೆ.
ಅಮೆಜಾನ್ನ ಉಪನದಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಅಮೆಜಾನ್ನ ಪ್ರಮುಖ ಉಪನದಿಯಾದ ಮಡೈರಾ ನದಿ, ಕೊಲಂಬಿಯಾದೊಂದಿಗೆ ಬ್ರೆಜಿಲ್ನ ಗಡಿಯಲ್ಲಿರುವ ತಬಾಟಿಂಗಾದಲ್ಲಿ ಸೊಲಿಮೆಸ್ ನದಿ ಈಗಾಗ್ಲೆ ಬತ್ತಿ ಹೋಗಿರುವ ಬಗ್ಗೆ ಜಿಲಿಯನ್ ಭೂವೈಜ್ಞಾನಿಕ ಸೇವೆ ವರದಿ ಮಾಡಿದೆ. ಸೊಲಿಮೋಸ್ ನದಿಯು ದಾಖಲೆಯ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ, ಸೊಲಿಮೋಸ್ನ ಒಂದು ಭಾಗವು ಸಂಪೂರ್ಣವಾಗಿ ಒಣಗಿಹೋಗಿದೆ. ಸತತ ಎರಡನೇ ಬಾರಿಗೆ ಅಮೆಜಾನ್ ನದಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ವರ್ಷವೂ ಇಲ್ಲಿ ಬರ ಎದುರಾಗಿತ್ತು.
ಈ ಪರಿಸರ ಬಿಕ್ಕಟ್ಟು ಬರ ಮತ್ತು ಜಾಗತಿಕ ತಾಪಮಾನದ ನಡುವಿನ ಸಂಪರ್ಕಗಳನ್ನು ಎತ್ತಿ ತೋರಿಸುತ್ತಿದೆ. ಅಲ್ಲದೇ ಅಮೆಜಾನ್ ಬರಗಳ ಮತ್ತೊಂದು ಅಂಶವೆಂದರೆ ಅರಣ್ಯನಾಶ. ಕಳೆದ 50 ವರ್ಷಗಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಮಳೆಕಾಡುಗಳು ನಾಶವಾಗಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಸತತ ಎರಡನೇ ವರ್ಷವೂ ಬರ ಎದುರಿಸುತ್ತಿರುವ ಅಮೆಜಾನ್ ಜಲಾನಯನ ಪ್ರದೇಶವು, ಅಲ್ಲಿನ ಪರಿಸರ ವ್ಯವಸ್ಥೆ, ಜೀವವೈವಿಧ್ಯ ಮತ್ತು ಈ ಪ್ರಮುಖ ಜಲಮಾರ್ಗಗಳನ್ನು ಅವಲಂಬಿಸಿರುವ ಸಾಕಷ್ಟು ಸಮುದಾಯಗಳಿಗೆ ನೀರಿನ ಮಟ್ಟ ಕುಸಿಯುತ್ತಿರುವುದು ತೀವ್ರ ಚಿಂತೆಗೀಡು ಮಾಡಿದೆ.