ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಸಾಕಷ್ಟು ದಿನಗಳೇ ಕಳೆದು ಹೋಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ನಾಗನ ಕಾರಣದಿಂದ ಆರಾಮಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನರಕವಾಗಿದೆ. ಹೊರಗಿದ್ದ ವೇಳೆ ಸಾಕಷ್ಟು ಜನರೊಂದಿಗೆ ಅರಾಮಾಗಿದ್ದ ಪಾರ್ಟಿ ಪಬ್ಬು ಅಂತಿದ್ದ ದರ್ಶನ್ ಬಳ್ಳಾರಿ ಜೈಲಿನ ಒಂಟಿತನಕ್ಕೆ ಸೊರಗಿ ಹೋಗಿದ್ದಾರೆ. ಮಾತನಾಡಲು ಯಾರು ಇಲ್ಲದೆ, ಊಟ ತಿಂಡಿ ಸೇರದೆ ನಿದ್ದೆ ಬರದೆ ದರ್ಶನ್ ಸಂಪೂರ್ಣ ಸಪ್ಪಗಾಗಿದ್ದಾರೆ. ಇತ್ತೀಚೆಗೆ ದರ್ಶನ್ ತಾಯಿ ಮೀನಾ ತೂಗುದೀಪ್ ಬಳ್ಳಾರ ಜೈಲಿಗೆ ಆಗಮಿಸಿ ಮಗನನ್ನು ನೋಡಿ ಧೈರ್ಯ ತುಂಬಿ ಹೋಗಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗಲೂ ಒಮ್ಮೆ ಮೀನಾ ಅವರು ಜೈಲಿಗೆ ಆಗಮಿಸಿದ್ದರು. ಇದೀಗ ಬಳ್ಳಾರಿಗೆ ಬಂದು ದರ್ಶನ್ ಅನ್ನು ನೋಡಿ ಹೋಗಿದ್ದಾರೆ. ತಾಯಿ ಬಂದು ಹೋದಮೇಲೆ ದರ್ಶನ್ ವರ್ತನೆ ಹಾಗೂ ಮಾತುಗಳಲ್ಲಿ ಬದಲಾವಣೆ ಆಗಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಮಾಧ್ಯಮಗಳಿಗೆ ಅಸಹ್ಯಕರವಾಗಿ ಸಂಜ್ಞೆ ಮಾಡಿದ್ದ ದರ್ಶನ್, ಈಗ ಜೈಲು ಸಿಬ್ಬಂದಿಯ ಮುಂದೆ ಕಣ್ಣೀರು ಹಾಕಿದ್ದಾರಂತೆ.
ತಾಯಿ ಭೇಟಿಯ ವಿಚಾರವನ್ನು ಸಿಬ್ಬಂದಿ ಮುಂದೆ ಮಾತನಾಡಿದ ದರ್ಶನ್ ಭಾವುಕಗೊಂಡರಂತೆ. ‘ನಾನು ಮಾಡಿದ ತಪ್ಪಿಗೆ ನನ್ನ ತಾಯಿ ಇಲ್ಲಿಗೆ ಬಂದು ನೋಡುವ ಸ್ಥಿತಿ ಬಂತು. ಮಗನನ್ನ ಜೈಲಿನಲ್ಲಿ ನನ್ನ ತಾಯಿ ಭೇಟಿ ಮಾಡುವ ಪರಿಸ್ಥಿತಿ ಬಂತಲ್ಲಾ’ ಎಂದು ಕಣ್ಣೀರು ಹಾಕಿದರಂತೆ. ‘ಕಷ್ಟದ ಪರಿಸ್ಥಿತಿ ಬಂದಿದೆ ನನ್ನ ತಪ್ಪಿನಿಂದ ಕುಟುಂಬ ನೋವು ಅನುಭವಿಸುವಂತಾಗಿದೆ. ನಾನು ನಂಬಿದ ತಾಯಿ ಚಾಮುಂಡೇಶ್ವರಿ ನನ್ನ ಕೈ ಬಿಡಲ್ಲ’ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರಂತೆ ನಟ ದರ್ಶನ್. ಕೊನೆಗೆ ಕಾವಲು ಸಿಬ್ಬಂದಿ ದರ್ಶನ್ಗೆ ಸಮಾಧಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಜಾಮೀನು ಅರ್ಜಿ ಸಲ್ಲಿಸಿದ ಬಳಿಕ ನಟ ದರ್ಶನ್ ತುಸು ನಿರಾಳರಾಗಿದ್ದಾರೆ ಎನ್ನಲಾಗುತ್ತಿದೆ. ಭಾನುವಾರದಂದು ಮಧ್ಯಾಹ್ನ ಎರಡು ಚಪಾತಿ, ಪಲ್ಯಾ, ಮಜ್ಜಿಗೆ ಮಾತ್ರ ಸೇವಿಸಿದ ದರ್ಶನ್, ತಾಯಿ-ಪತ್ನಿ ತಂದುಕೊಂಟ್ಟಿದ್ದ ಹಣ್ಣು, ಡ್ರೈ ಫ್ರೂಟ್ಸ್ಗಳನ್ನು ಸೇವಿಸುತ್ತಿದ್ದಾರೆ. ದರ್ಶನ್ ರ ಜಾಮೀನು ಅರ್ಜಿ ಶನಿವಾರ ನ್ಯಾಯಾಧೀಶರ ಮುಂದೆ ಬಂದಿದ್ದು, ವಿಚಾರಣೆನ್ನು ಇಂದಿಗೆ ಮುಂದೂಡಲಾಗಿದೆ.