ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲು ಸೇರಿ ಸಾಕಷ್ಟು ದಿನಗಳೇ ಕಳೆದಿದೆ. ಶನಿವಾರ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಈ ಮೂಲಕ ಇಂದು ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಕೆಲವರು ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಆದರೆ ದರ್ಶನ್ ಮಾತ್ರ ಜಾಮೀನಿಗೆ ಅರ್ಜಿ ಸಲ್ಲಿಸಲು ಸ್ವಲ್ಪ ಹಿಂದೇಟು ಹಾಕಿದ್ರು. ಆದ್ರೆ ಈಗ ಅವರು ಕೂಡ ತಮ್ಮ ವಕೀಲರ ಮೂಲಕ ಕಾನೂನು ಹೋರಾಟ ಶುರು ಮಾಡಿದ್ದು, ಈಗಾಗಲೇ 57ನೇ ಸಿಸಿಹೆಚ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ವಕೀಲರಾದ ಎಸ್. ಸುನೀಲ್ ದರ್ಶನ್ ಜಾಮೀನು ಅರ್ಜಿಯನ್ನ ಸಲ್ಲಿಸಿದ್ದು, ನ್ಯಾಯಾಧೀಶರಾದ ಜಯಶಂಕರ್ ಅರ್ಜಿ ವಿಚಾರಣೆ ನಡೆಸಿದ್ರು. ಬಳಿಕ ಸರ್ಕಾರದ ಪರ ಎಸ್ಪಿಪಿಗೆ ಆಕ್ಷೇಪಣೆಗೆ ಅವಕಾಶ ಕೊಟ್ಟು ನೋಟಿಸ್ ನೀಡಿದ್ದು, ಇಂದಿಗೆ ವಿಚಾರಣೆ ಮುಂದೂಡಲಾಗಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಹೋದಾಗಿನಿಂದ ಸಾಕಷ್ಟು ತೊಂದರೆ ಅನುಭವಿಸ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಸಿಕ್ಕಷ್ಟು ಸೌಲಭ್ಯಗಳೂ ಇಲ್ಲದೇ ಒದ್ದಾಡ್ತಿರೋ ದರ್ಶನ್ ಜೈಲಾಧಿಕಾರಿಗಳ ಮುಂದೆ ಬೇಡಿಕೆಗಳ ಮೇಲೆ ಬೇಡಿಕೆಗಳನ್ನ ಇಡ್ತಾನೇ ಬಂದಿದ್ದಾರೆ. ಅದ್ರಲ್ಲಿ ಕೆಲವೊಂದು ಬೇಡಿಕೆಗಳನ್ನು ಜೈಲು ಸಿಬ್ಬಂದಿ ಈಡೇರಿದ್ದಾರೆ. ಈ ಮಧ್ಯೆ ದರ್ಶನ್ ನೋಡಲು ಜೈಲಿಗೆ ಬಂದಿದ್ದ ತಾಯಿ ಮಗನಿಗೆ ದೈರ್ಯ ತುಂಬಿ ಹೋಗಿದ್ದಾರೆ. ಅಲ್ಲದೆ ಆದಷ್ಟು ಬೇಗ ಮಗ ಹೊರಗೆ ಬರಲಿದ್ದಾನೆ ಎಂದು ಭವಿಷ್ಯ ನುಡಿದಿದ್ದಾರೆ. ಅಮ್ಮನ ಮಾತುಗಳು ದರ್ಶನ್ ಗೆ ಆನೆ ಬಲ ತಂದುಕೊಟ್ಟಿದೆ. ಆದರೆ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ ಎವಿಡೆನ್ಸ್ ಬಹಳ ಸ್ಟ್ರಾಂಗ್ ಆಗಿದೆ.
ದರ್ಶನ್ ವಿರುದ್ಧ ನಾನ್ ಬೇಲೆಬಲ್ ಸೆಕ್ಷನ್ಗಳನ್ನೂ ಹಾಕಲಾಗಿದೆ. ಇಡೀ ಪ್ರಕರಣದ 2ನೇ ಆರೋಪಿ ದರ್ಶನ್ ಆಗಿದ್ದು, ಬೇಲ್ ಸಿಗೋದು ಬಹುತೇಕ ಡೌಟ್ ಆಗಿದೆ. ಅತ್ತ ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಸಾಕಷ್ಟು ದೇವರುಗಳ ಮೊರೆ ಹೋಗ್ತಿದ್ದಾರೆ. ಜೊತೆ ದರ್ಶನ್ ಅಭಿಮಾನಿಗಳು ಕೂಡ ನೆಚ್ಚಿನ ನಟನ ಬಿಡುಗಡೆಗಾಗಿ ಪ್ರಾರ್ಥಿಸ್ತಿದ್ದಾರೆ. ಈ ಮಧ್ಯೆ ದರ್ಶನ್ ಭವಿಷ್ಯ ಇಂದು ಏನಾಗಲಿದೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.