ತಮಿಳು ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಮಧ್ಯೆ ಡಿವೋರ್ಸ್ ಕಾರಣಕ್ಕೆ ಕಿತ್ತಾಟ ಶುರವಾಗಿದೆ. ಜಯಂ ರವಿಗೆ ಗಾಯಕಿಯ ಜೊತೆ ಅಫೇರ್ ಇರುವ ಕಾರಣದಿಂದ ನನ್ನಿಂದ ಅವರು ದೂರ ಆಗಿದ್ದಾರೆ ಎಂದು ಆರತಿ ಆರೋಪ ಮಾಡಿದ್ದಾರೆ. ಅಲ್ಲದೆ, ಜಯಂ ರವಿ ಅವರು ನನ್ನ ಕೇಳದೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಆರತಿ ಆರೋಪದ ಬಗ್ಗೆ ಜಯಂ ರವಿ ಸ್ಪಷ್ಟನೆ ನೀಡಿದ್ದಾರೆ.
ಜಯಂ ರವಿ ಕೆಲ ದಿನಗಳ ಹಿಂದೆ ಆರತಿಗೆ ವಿಚ್ಛೇದನ ನೀಡುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಆರತಿ ಇಂದ ದೂರ ಆಗುತ್ತಿದ್ದೇನೆ ಎಂದು ಜಯಂ ರವಿ ಹೇಳುತ್ತಿದ್ದಂತೆ ಗಾಯಕಿ ಕೆನಿಶಾ ಹೆಸರು ಜಯಂ ರವಿ ಜೊತೆ ಕೇಳಿ ಬಂದಿತ್ತು. ಈ ಕುರಿತು ಜಯಂ ಸ್ಪಷ್ಟನೆ ನೀಡಿದ್ದಾರೆ.
‘ನನಗೆ ವಿಚ್ಛೇದನ ಬೇಕು. ಆರತಿಗೆ ರಾಜಿ ಆಗಬೇಕು ಎನ್ನುವ ಉದ್ದೇಶ ಇದ್ದರೆ ಅವಳು ಏಕೆ ನನ್ನ ಭೇಟಿ ಮಾಡಿಲ್ಲ? ಎರಡು ಲೀಗಲ್ ನೋಟಿಸ್ ಕಳುಹಿಸಿದರೂ ಏಕೆ ಉತ್ತರ ನೀಡಿಲ್ಲ? ಇದು ರಾಜಿ ಮಾಡಿಕೊಳ್ಳುವವರ ಲಕ್ಷಣವೇ? ಒಂದೊಮ್ಮೆ ಇದೇ ಉದ್ದೇಶ ಇದ್ದಿದ್ದರೆ ನಾನು ಗರ್ಲ್ಫ್ರೆಂಡ್ ಹೊಂದಿದ್ದೇನೆ ಎನ್ನುವ ಸುದ್ದಿ ಹರಡಿಸುತ್ತಿದ್ದರೇ’ ಎಂದು ಪ್ರಶ್ನೆ ಮಾಡಿದ್ದಾರೆ.
‘ನನ್ನ ಹಾಗೂ ಕೆನೀಶಾ ಮಧ್ಯೆ ಸಂಭಂಧ ಇದೆ ಎನ್ನುವ ಸುದ್ದಿ ಹೇಗೆ ಹರಿದಾಡಿತು? ಮೂರನೇ ವ್ಯಕ್ತಿಯ ಹೆಸರನ್ನು ಏಕೆ ಎಳೆದು ತರಲಾಗುತ್ತಿದೆ. ನಾನು ಕೆನೀಶಾ ಜೊತೆ ಆಧ್ಯಾತ್ಮ ಕೇಂದ್ರ ಆರಂಭಿಸುವ ಆಲೋಚನೆ ಹೊಂದಿದ್ದೇನೆ. ಅವರಿಗೂ ವಿಚ್ಛೇದನಕ್ಕೂ ಯಾವುದೇ ಸಂಬಂಧ ಇಲ್ಲ. ಇದು ನಮ್ಮ ಕುಟುಂಬದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ’ ಎಂದು ಜಯಂ ರವಿ ಹೇಳಿದ್ದಾರೆ.
‘ಮಕ್ಕಳಾದ ಆರವ್ ಹಾಗೂ ಅಯಾನ್ ಅವರು ನನಗೆ ಬೇಕು. ಹತ್ತು ವರ್ಷ ಆಗಲಿ, ಇಪ್ಪತ್ತು ವರ್ಷ ಆಗಲಿ ನಾನು ಕೋರ್ಟ್ನಲ್ಲಿ ಈ ಕೇಸ್ನ ಹೋರಾಡಲು ರೆಡಿ ಇದ್ದೇನೆ. ನನ್ನ ಮಕ್ಕಳೇ ನನ್ನ ಭವಿಷ್ಯ. ನಾನು ನನ್ನ ಮಗ ಆರವ್ಗಾಗಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ಸರಿಯಾದ ಸಮಯ ನೋಡಿಕೊಂಡು ಅವನ ಲಾಂಚ್ ಮಾಡುತ್ತೇನೆ. ನಾನು ಆರು ವರ್ಷಗಳ ಹಿಂದೆ ಅವನ ಜೊತೆ ‘ಟಿಕ್ ಟಿಕ್ ಟಿಕ್’ ಹೆಸರಿನ ಸಿನಿಮಾ ಮಾಡಿದ್ದೆ. ಇದರ ಸಕ್ಸಸ್ ಮೀಟ್ನಲ್ಲಿ ಅವನ ಜೊತೆ ಇದ್ದಿದ್ದು ನಿಜಕ್ಕೂ ಖುಷಿಯ ಸಮಯ ಆಗಿತ್ತು’ ಎಂದು ಹೇಳಿದ್ದಾರೆ.