ಮೈಸೂರು: ದಸರಾ ಆನೆಗಳ ಮುಂದೆ ಫೋಟೊ, ಸೆಲ್ಫಿ ತೆಗೆದುಕೊಳ್ಳವವರಿಗೆ ಕಡಿವಾಣ ಹಾಕಬೇಕು ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಅರಮನೆ ಆವರಣದಲ್ಲಿ ಕಂಜನ್ ಮತ್ತು ಧನಂಜಯ್ ಆನೆಗಳ ಜಗಳ ವಿಚಾರವಾಗಿ ಮಾತನಾಡಿ, ಬಹಳ ಗಂಭೀರವಾದ ಘಟನೆ ನಡೆದಿದೆ. ಆನೆಗಳ ಗಲಾಟೆ ವಿಡಿಯೋ ನೋಡಿದ್ದೇನೆ.
ಇದು ಜನರಿಂದ ಆಗಿರುವುದಲ್ಲ ಎಂದು ವರದಿ ಬಂದಿದೆ. ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆನೆಗಳ ಮುಂದೆ ಫೋಟೊ, ವಿಡಿಯೋ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಅವಕಾಶ ಕೊಡಬಾರದು ಎಂದರು.ಮಹಿಷಾ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಂವಿಧಾನ ದೃಷ್ಟಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡಿದರೆ ತೊಂದರೆ ಇಲ್ಲ. ಯಾರಿಗೂ ಯಾವುದೇ ರೀತಿಯ ಹಾನಿಯಾಗದ ರೀತಿ ಕಾರ್ಯಕ್ರಮ ಮಾಡಿಕೊಳ್ಳಬಹುದು.
ಅದನ್ನ ಯಾರು ನಿಲ್ಲಿಸಲು ಸಾಧ್ಯವಿಲ್ಲ. ತಾಯಿ ಚಾಮುಂಡೇಶ್ವರಿಯಲ್ಲಿ ನಂಬಿಕೆಯಿಟ್ಟ ಎಲ್ಲರೂ ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟ ಎಲ್ಲರ ಭಾವನೆಗೆ ಧಕ್ಕೆಯಾಗದ ರೀತಿ ಮಾಡಿಕೊಳ್ಳಿ ಎಂದು ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ವಿಚಾರವಾಗಿ ಮಾತನಾಡಿ, ಚಾಮುಂಡೇಶ್ವರಿ ತಾಯಿ ಕ್ಷೇತ್ರ ಅದು. ಜಿಲ್ಲಾಡಳಿತ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಪದ್ಧತಿ ಏನಿದೆ, ಧರ್ಮದಲ್ಲಿ ನಾವು ಏನು ಅನುಸರಿಸುತ್ತೇವೆ, ನಮ್ಮ ನಂಬಿಕೆ ಏನಿದೆ, ಅದಕ್ಕೆ ಧಕ್ಕೆ ಬರಬಾರದು ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಎಚ್ಚರಿಕೆ ನೀಡಿದರು.