ಪೂರ್ವ ಇರಾನ್ನ ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 50 ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಫೋಟದ ವೇಳೆ ಗಣಿಯೊಳಗೆ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ಇನ್ನೂ ಒಳಗೇ ಸಿಲುಕಿರಬಹುದು ಎಂಬ ಶಂಕೆ ಇದ್ದು, ಅವರ ರಕ್ಷಣೆಗಾಗಿ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ.
ಇರಾನ್ ರಾಜಧಾನಿ ಟೆಹ್ರಾನ್ನ ಆಗ್ನೇಯಕ್ಕೆ ಸುಮಾರು 540 ಕಿಮೀ (335 ಮೈಲಿ) ದೂರದಲ್ಲಿ ಈ ಸ್ಫೋಟ ಸಂಭವಿಸಿದೆ. ತಬಾಸ್ನಲ್ಲಿರುವ ಮದಂಜೂ ಕಂಪನಿಯು ನಡೆಸುತ್ತಿರುವ ಕಲ್ಲಿದ್ದಲು ಗಣಿಯಲ್ಲಿ ಮಿಥೇನ್ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿಯ ಪ್ರಕಾರ ಶನಿವಾರ ರಾತ್ರಿ, ಭಾರತೀಯ ಕಾಲಮಾನ 9:00 ಗಂಟೆಗೆ ಹಠಾತ್ ಅನಿಲ ಸೋರಿಕೆ ಸಂಭವಿಸಿಸಿದೆ. ಈ ವೇಳೆ ಗಣಿ B ಮತ್ತು C ಎರಡು ಬ್ಲಾಕ್ಗಳಲ್ಲಿ ಕನಿಷ್ಠ 69 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಸ್ಫೋಟದಿಂದಾಗಿ ಕನಿಷ್ಠ 50 ಮಂದಿ ಸತ್ತಿದ್ದಾಗಿ ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ ಬಿ ಬ್ಲಾಕ್ನಲ್ಲಿದ್ದ 47 ಕಾರ್ಮಿಕರಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ.
ಬಿ ಬ್ಲಾಕ್ನಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಸಿ ಬ್ಲಾಕ್ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿದ್ದು, ಬ್ಲಾಕ್ನಲ್ಲಿ ಮೀಥೇನ್ ಸಾಂದ್ರತೆ ಹೆಚ್ಚಿದ್ದು, ಕಾರ್ಯಾಚರಣೆಯು ಸುಮಾರು ಮೂರು-ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ತಬಾಸ್ ಗಣಿ 30,000 ಚದರ ಕಿಲೋಮೀಟರ್ ಗಿಂತ ಹೆಚ್ಚು ಪ್ರದೇಶವನ್ನು ಆವರಿಸಿದೆ ಮತ್ತು IRNA ಪ್ರಕಾರ ಕೋಕಿಂಗ್ ಮತ್ತು ಉಷ್ಣ ಕಲ್ಲಿದ್ದಲಿನ ಸಾಮೂಹಿಕ ನಿಕ್ಷೇಪಗಳನ್ನು ಹೊಂದಿದೆ. ಇದು ಇರಾನ್ನ ಅತ್ಯಂತ ಶ್ರೀಮಂತ ಮತ್ತು ಅತಿದೊಡ್ಡ ಕಲ್ಲಿದ್ದಲು ಪ್ರದೇಶವೆಂದು ಪರಿಗಣಿಸಲಾಗಿದೆ.