ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ 56 ವರ್ಷದ ಅನುರ ದೇಶದ ಆರ್ಥಿಕತೆ ಬಲಪಡಿಸುವ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕುವ ಭರವಸೆ ನೀಡಿದರು.
ಶನಿವಾರ ನಡೆದ ಚುನಾವಣೆಯಲ್ಲಿ ಮಾರ್ಕ್ಸ್ವಾದಿ ಜನತಾ ವಿಮುಕ್ತಿ ಪೆರಮುನ ಪಕ್ಷದ ವಿಶಾಲ ರಂಗದ ನ್ಯಾಷನಲ್ ಪೀಪಲ್ಸ್ ಪವರ್ ನಾಯಕ ಡಿಸಾನಾಯಕೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು.
ದೇಶ ಆರ್ಥಿಕ ಬಿಕ್ಕಟ್ಟು ಎದುರಿಸಿದ ನಂತರ 2022 ರಲ್ಲಿ ಸಾಮೂಹಿಕ ಪ್ರತಿಭಟನೆಯಿಂದ ಗೋಟಾಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸಿದ ನಂತರ ನಡೆದ ಮೊದಲ ಚುನಾವಣೆಯಾಗಿದೆ. ಪ್ರಮಾಣ ವಚನ ಸ್ವೀಕಾರ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಡಿಸಾನಾಯಕೆ, ಜನಾದೇಶವನ್ನು ಗೌರವಿಸಿದ್ದಕ್ಕಾಗಿ ಮತ್ತು ಅಧಿಕಾರದ ಶಾಂತಿಯುತ ಹಸ್ತಾಂತರವನ್ನು ಸುಗಮಗೊಳಿಸಿದ್ದಕ್ಕಾಗಿ ನಿರ್ಗಮಿತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಧನ್ಯವಾದ ಸಲ್ಲಿಸಿದರು.
ಅಧ್ಯಕ್ಷೀಯ ಚುನಾವಣೆಯ ನಂತರ ದೇಶದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಭಾಗವಾಗಿ ಪ್ರಧಾನಿ ದಿನೇಶ್ ಗುಣವರ್ಧನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.