ಧಾರವಾಡ: ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೃಷಿ ವಿಶ್ವವಿದ್ಯಾಲಯದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ವಿಶ್ವವಿದ್ಯಾಲಯ ಆಡಳಿತಾಧಿಕಾರಿಗಳು ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ರೈತರ ಶ್ರೇಯೋಭಿವೃದ್ಧಿ ಮತ್ತು ಕೃಷಿ ವಲಯದ ಬೆಳವಣಿಗೆಗೆ ಶ್ರಮಿಸಬೇಕು.
ನಮ್ಮ ನಿಮ್ಮ ಅಧಿಕಾರ ಶಾಶ್ವತವಲ್ಲ. ಇದ್ದಷ್ಟು ದಿನ ರೈತರಿಗಾಗಿ ಕೆಲಸ ಮಾಡಬೇಕು ಎಂದು ಕುಲಪತಿ ಡಾ. ಪಿ.ಎಲ್. ಪಾಟೀಲ ಅವರಿಗೆ ಸಲಹೆ ನೀಡಿದರು.
ಭಾರತ ವಿಶ್ವದಲ್ಲಿ ಅತಿ ಹೆಚ್ಚು ನೀರಾವರಿ ವ್ಯವಸ್ಥೆ ಹೊಂದಿರುವ ದೇಶ. ಚೀನಾ- ಭಾರತದ ಜನಸಂಖ್ಯೆ ಸಮ ಸಮ ಇದೆ. ಚೀನಾದಲ್ಲಿ ನಮಗಿಂತ ಉಳುಮೆ ಭೂಮಿ ಕಡಿಮೆ ಇದೆ. ಆದರೂ ನಮಗಿಂತ 3 ಪಟ್ಟು ಹೆಚ್ಚು ಉತ್ಪಾದನೆ ಮಾಡುತ್ತಾರೆ. ಈ ಬಗ್ಗೆ ಸಂಶೋಧನೆ ಮಾಡುವುದು ಕೃಷಿ ವಿಶ್ವವಿದ್ಯಾಲಯದ ಕೆಲಸ ಆಗಬೇಕು. ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಜತೆಗೂಡಿ ಕೆಲಸ ಮಾಡುತ್ತಿಲ್ಲ. ಬಿತ್ತನೆ ಪ್ರಮಾಣ, ಯಾವ ಪ್ರದೇಶದಲ್ಲಿ ಯಾವ ಬೆಳೆ ಬಿತ್ತನೆಯಾಗಿದೆ ಎಂಬ ಮಾಹಿತಿ ಇಲ್ಲದಿರುವುದು ಖೇದಕರ ಸಂಗತಿ. ಕೃಷಿ, ತೋಟಗಾರಿಕೆಯ ಅಂಕಿ- ಅಂಶ, ಮೂಲ ಮಾಹಿತಿಯೇ ಇಲ್ಲದಿದ್ದರೆ ಹೇಗೆ? ಆದ್ದರಿಂದ ವಿಶ್ವವಿದ್ಯಾಲಯ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಕೆಡಿಪಿ ಸಭೆಗೆ ಕುಲಪತಿ ಹಾಜರಾಗಬೇಕು ಎಂದು ಸೂಚಿಸಿದರು.
4 ದಿನಗಳ ಕೃಷಿ ಮೇಳಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಬಂದರು ಹೋದರು. ಅದರ ಪರಿಣಾಮ ಮೌಲ್ಯಮಾಪನ ಆಗುತ್ತಿಲ್ಲ. ಸುಮಾರು 3 ಸಾವಿರ ವಿದ್ಯಾರ್ಥಿಗಳು ಓದುವ ವಿದ್ಯಾರ್ಥಿಗಳ ಸಂಶೋಧಿತ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ ಕೆಲಸ ಆಗಬೇಕು. ದೇಶ, ರಾಜ್ಯ, ಜಿಲ್ಲೆಗಳಲ್ಲಿ ಕೃಷಿ ಇಳುವರಿ ಕಡಿಮೆಯಾಗುತ್ತಿರುವ ಬಗ್ಗೆ ವಿವಿ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.