ಕಿರಣ್ ರಾವ್ ನಿರ್ದೇಶನದ, ಆಮಿರ್ ಖಾನ್ ನಿರ್ಮಾಣದ ಲಾಪತಾ ಲೇಡೀಸ್ ಸಿನಿಮಾ ಅಧಿಕೃತವಾಗಿ 2024ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿದೆ. ಈ ವರ್ಷ ಮಾರ್ಚ್ 1ರಂದು ತೆರೆಕಂಡ ಈ ಚಿತ್ರದಲ್ಲಿ ಸ್ಪರ್ಶ್ ಶ್ರೀವಾಸ್ತವ್, ನಿತಾಂಶಿ ಗೋಯಲ್, ಪ್ರತಿಭಾ ರಂಟಾ, ರವಿ ಕಿಶನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವುದಕ್ಕೆ ‘ಲಾಪತಾ ಲೇಡೀಸ್’ ನಿರ್ದೇಶಕಿ ಕಿರಣ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
‘ನಮ್ಮ ಸಿನಿಮಾ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವುದು ಇಡೀ ತಂಡದ ಪರಿಶ್ರಮ ಮತ್ತು ಪ್ಯಾಷನ್ಗೆ ಸಾಕ್ಷಿಯಾಗಿದೆ. ಸಿನಿಮಾ ಎಂಬುದು ಯಾವಾಗಲೂ ಹೃದಯಗಳನ್ನು ಬೆಸೆಯುವ, ಅರ್ಥಪೂರ್ಣ ಸಂವಹನ ನಡೆಸುವ ಹಾಗೂ ಗಡಿಗಳನ್ನು ಮೀರುವ ಮಾಧ್ಯಮವಾಗಿದೆ. ಭಾರತೀಯರಿಗೆ ಇಷ್ಟ ಆದ ರೀತಿಯೇ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಅಂತ ನಾನು ನಂಬಿದ್ದೇನೆ’ ಎಂದು ಕಿರಣ್ ರಾವ್ ಹೇಳಿದ್ದಾರೆ.
‘ಲಾಪತಾ ಲೇಡೀಸ್ ಸಿನಿಮಾ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಮತ್ತು ಆಯ್ಕೆ ಸಮಿತಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ವರ್ಷದ ಹಲವು ಅತ್ಯುತ್ತಮ ಸಿನಿಮಾಗಳ ನಡುವೆ ನಮ್ಮ ಸಿನಿಮಾ ಆಯ್ಕೆ ಆಗಿದ್ದು ಅತ್ಯಂತ ಹೆಮ್ಮೆಯ ವಿಷಯ. ಉಳಿದ ಸಿನಿಮಾಗಳು ಕೂಡ ಅಷ್ಟೇ ಸಮರ್ಥವಾಗಿವೆ’ ಎಂದು ಕಿರಣ್ ರಾವ್ ತಿಳಿಸಿದ್ದಾರೆ.
‘ನಮಗೆ ಬೆಂಬಲ ನೀಡಿದ ಆಮಿರ್ ಖಾನ್ ಪ್ರೊಡಕ್ಷನ್ಸ್ ಮತ್ತು ಜಿಯೋ ಸ್ಟುಡಿಯೋಸ್ ಸಂಸ್ಥೆಗಳಿಗೆ ಧನ್ಯವಾದಗಳು. ಪ್ರತಿಭಾವಂತ ತಂತ್ರಜ್ಞರ ಜೊತೆ ಕೆಲಸ ಮಾಡಿದ್ದು ನಮ್ಮ ಪಾಲಿನ ಹಿರಿಮೆ. ಈ ಸಿನಿಮಾ ನಿರ್ಮಾಣವಾಗಲು ಕಾರಣರಾದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ತಂಡಕ್ಕೆ ಕೂಡ ನಾನು ಧನ್ಯವಾದ ತಿಳಿಸುತ್ತೇನೆ. ಇದು ಮರೆಯಲಾಗದ ಜರ್ನಿ ಆಗಿತ್ತು ಎಂದು ಹೇಳಿದ್ದಾರೆ.