ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ನಟ ಚೇತನ್ ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಶಿವಕುಮಾರ್ ಎಂಬುವವರು ನೀಡಿದ್ದ ದೂರಿನ ಮೇಲೆ ಚೇತನ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ನೀಡುವಂತೆ ನ್ಯಾಯಾಧೀಶೆ ಲತಾ ಅವರು ಆದೇಶಿಸಿದ್ದಾರೆ.
ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎಂಬ ಕಾರಣಕ್ಕೆ ಚೇತನ್ ಅವರನ್ನು ಎರಡು ದಿನಗಳ ಹಿಂದೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದರು. ಪೊಲೀಸರು ಹಾಕಿರುವ ಎಫ್ ಐಆರ್ ಆಧರಿಸಿ ನ್ಯಾಯಾಲಯವು ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಈ ಸಂದರ್ಭದಲ್ಲಿ ಚೇತನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಚೇತನ್ ಅವರು ಉರಿಗೌಡ, ನಂಜೇಗೌಡ ವಿಚಾರವಾಗಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಈ ಕುರಿತು ಶಿವಕುಮಾರ್ ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.