14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (ಮಾ.23) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಈ ವೇಳೆ ಬೊಮ್ಮಾಯಿ ಕನ್ನಡದ ಕೆಜಿಎಫ್, ಕಾಂತಾರ, ಆಸ್ಕರ್ ಗೆದ್ದಿರುವ RRR ಚಿತ್ರವನ್ನ ಹಾಡಿ ಹೊಗಳಿದ್ದಾರೆ.
ಇಡೀ ಜಗತ್ತಿನಲ್ಲಿ ಚಿತ್ರೋತ್ಸವ ಅತ್ಯಂತ ಕಡಿಮೆ ನಗರದಲ್ಲಿ ನಡೆಯುತ್ತದೆ. ಅದರಲ್ಲಿ ಬೆಂಗಳೂರು ಒಂದಾಗಿರೋದು ಹೆಮ್ಮೆಯ ವಿಚಾರವಾಗಿದ್ದು, ಮುಂಬರುವ ದಿನಗಳಲ್ಲಿ ಬೆಂಗಳೂರು ಫೈನಾನ್ಸ್ ಕ್ಯಾಪಿಟಲ್ ಆಗಲಿದೆ. ಮಾತಿಲ್ಲದ ಸಿನಿಮಾದಿಂದ ಹಿಡಿದು ಅತ್ಯಂತ ಅದ್ಬುತ ತಂತ್ರಜ್ಞಾನ ಬಳಕೆ ಮಾಡಿದ ಸಿನಿಮಾ ನಮ್ಮಲ್ಲಿದೆ. ಬೆಂಗಳೂರು ಅಂತರಾಷ್ಟ್ರೀಯ ನಗರ. ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಜನ ವಿಜ್ಞಾನಿಗಳು ಬರುತ್ತಾರೆ. 400 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬೆಳೆದಿದೆ. ಇಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಯದೆ ಇನ್ನೆಲ್ಲಿ ನಡೆಯುತ್ತದೆ ಎಂದರು.
ಸಿನಿಮಾಗೆ ಸಾಕಷ್ಟು ದೊಡ್ಡ ಇತಿಹಾಸ ಇದೆ. ಅತ್ಯಂತ ಅದ್ಬುತವಾದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಡಿಜಿಟಲೀಕರಣ ಆದ ಮೇಲೆ ಬಹಳಷ್ಟು ಬದಲಾವಣೆ ಆಗಿದೆ. ನಾವು ನೋಡುವುದಕ್ಕೂ, ನಮ್ಮ ಮಕ್ಕಳು ಸಿನೆಮಾ ನೋಡುವುದಕ್ಕು ವ್ಯತ್ಯಾಸ ಇದೆ. ಬದುಕಿನಲ್ಲಿ ಎಲ್ಲವೂ ವೇಗವಾಗಿ ಬೆಳೆಯುತ್ತಿರುವುದರಿಂದ ಸಿನೆಮಾದಲ್ಲಿಯೂ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಈಗ ತಂತ್ರಜ್ಞಾನದ ಮೂಲಕ ಹೋದರೆ ಯಶಸ್ಸು ಸಿಗುತ್ತದೆ ಎಂದರು.
ʻಕೆಜಿಎಫ್ʼ ಮತ್ತು ʻಕಾಂತಾರʼ ಸಿನಿಮಾ ಬಗ್ಗೆ ಯಾರು ನಿರೀಕ್ಷೆ ಮಾಡಿರಲಿಲ್ಲ. ʻಕಾಂತಾರʼ ಸ್ಥಳೀಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗದುಕೊಂಡು ಹೋಗಿದ್ದು, ಆ ತಂಡಕ್ಕೆ ಅಭಿನಂದನೆಗಳು. RRR ಸಿನಿಮಾ ಆಸ್ಕರ್ ಪಡೆದಿದ್ದು ನಾವೆಲ್ಲ ಹೆಮ್ಮೆ ಪಡಬೇಕು. ಇದರಿಂದ ಆಸ್ಕರ್ ನಮಗೆ ದೂರ ಇಲ್ಲ. ಪ್ರತಿವರ್ಷ ಪಡೆಯಬಹುದು ಅಂತ ತೋರಿಸಿ ಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.