ಕೊಪ್ಪಳ: ಯಾವುದೇ ಕಾರಣಕ್ಕೂ ಬಿಜೆಪಿಯವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೆಡವಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಆದರೆ, ಅದು ಆಗದ ಕೆಲಸ. ಬಿಜೆಪಿಯವರು ಯಾವಾಗ ಪೂರ್ಣ ಬಹುಮತದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ.
ಅವರಿಗೆ ರಾಜ್ಯದ ಮತದಾರರು ಆಶೀರ್ವಾದ ಮಾಡಿಯೇ ಇಲ್ಲ. ಆದರೆ, ಅಡ್ಡ ದಾರಿ ಹಿಡಿದು ಅಧಿಕಾರಕ್ಕೆ ಬಂದಿದ್ದಾರೆ ಎಂದರು. ಈಗ 136 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಲಾಗಿದೆ.
ಈ ಸರ್ಕಾರವನ್ನು ಕೆಡುವ ಲೆಕ್ಕಾಚಾರ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ಇನ್ನು ಹತ್ತು ವರ್ಷ ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು. ತಿರುಪತಿ ಲಡ್ಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ತಪ್ಪು. ದೇಶದಾದ್ಯಂತ ಭಕ್ತರು ಇದ್ದಾರೆ.
ಪ್ರಸಾದ ಸ್ವೀಕಾರ ಮಾಡುತ್ತಾರೆ. ಅವರ ಭಾವನೆಗೆ ಧಕ್ಕೆ ಮಾಡುವುದು ಸರಿಯಲ್ಲ. ಆದರೆ, ನಂದಿನಿ ತುಪ್ಪ ಮಾತ್ರ ಶುದ್ಧವಾಗಿರುವ ತುಪ್ಪವಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಆ ರೀತಿಯಾಗಿಲ್ಲ ಎಂದರು. ಶಾಸಕ ಮುನಿರತ್ನ ಮಾತನಾಡಿದ ಆಡಿಯೋವನ್ನು ಕೇಳಿಯೂ ನೀವು ಅವರ ಮೇಲೆ ದ್ವೇಷದಿಂದ ಕೇಸ್ ಹಾಕಲಾಗುತ್ತದೆ ಎನ್ನುವುದು ಸರಿಯಲ್ಲ. ಅವರು ತಪ್ಪು ಮಾಡಿದ್ದಾರೆ, ಅದಕ್ಕೆ ಶಿಕ್ಷೆ ಅನುಭವಿಸುತ್ತಾರೆ. ಆದರೆ, ಯಾರು ಆ ರೀತಿ ಮಾತನಾಡಬಾರದು ಎಂದರು.