ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಕೋಲಾಹಲ ಎಬ್ಬಿಸಿದೆ. ಆಂಧ್ರ ಪ್ರದೇಶ ಸರ್ಕಾರ, ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದೇವಾಲಯದ ಶುಭ್ರತೆಗೆ ನಿರ್ದೇಶಿಸಿದೆ. ಅಲ್ಲದೆ, ಲಡ್ಡು ಮಾಡಲು ತುಪ್ಪ ಸರಬರಾಜು ಮಾಡುತ್ತಿದ್ದ ಏಜೆನ್ಸಿ ವಿರುದ್ಧ ದೂರು ಸಹ ದಾಖಲಾಗಿದೆ. ಈ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡುತ್ತಿದೆ. ಲಡ್ಡು ವಿವಾದದ ಬಗ್ಗೆ ಮಾತನಾಡುತ್ತಿರುವವರಿಗೆ ನಟ ಹಾಗೂ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ತಿರುಗೇಟು ನೀಡುತ್ತಿದ್ದಾರೆ. ಇದೀಗ ಲಡ್ಡು ಬಗ್ಗೆ ಮಾತನಾಡಿದ ಖ್ಯಾತ ನಟ ಕಾರ್ತಿಗೆ ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.
ಕಾರ್ತಿ ನಟನೆಯ ‘ಮೆಯಿಳಾಗನ್’ ಸೆಪ್ಟೆಂಬರ್ 27ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲಿ ‘ಸತ್ಯಂ-ಸುಂದರಂ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾರ್ತಿ ಇತ್ತೀಚೆಗಷ್ಟೆ ಹೈದರಾಬಾದ್ಗೆ ಆಗಮಿಸಿದ್ದರು. ಈ ವೇಳೆ ನಿರೂಪಕಿ, ‘ಲಡ್ಡು ಬೇಕಾ’ ಎಂದು ಜಾಹೀರಾತಿನ ಡೈಲಾಗ್ ಒಂದನ್ನು ತಮಾಷೆಗೆ ಹೇಳಿದರು. ಅದಕ್ಕೆ ಕಾರ್ತಿ, ‘ಲಡ್ಡು ವಿಷಯ ಈಗ ಬೇಡ, ಅದು ಬಹಳ ಸೆನ್ಸಿಟಿವ್ ವಿಷಯ ಆಗಿದೆ, ಲಡ್ಡು ಈಗ ಬೇಡ’ ಎಂದು ನಗುತ್ತಾ ಹೇಳಿದರು, ಅದಕ್ಕೆ ನಿರೂಪಕಿ, ‘ನಿಮಗಾಗಿ ಮೋತಿಚೂರ್ ಲಡ್ಡು ತರಿಸಿಕೊಡುತ್ತೇವೆ’ ಎನ್ನುತ್ತಾರೆ. ಅದಕ್ಕೆ ‘ಕಾರ್ತಿ, ಈಗ ಬೇಡ, ಲಡ್ಡು ಈಗ ಬೇಡ’ ಎಂದು ನಗುತ್ತಾ ಹೇಳಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪವನ್ ಕಲ್ಯಾಣ್, ‘ಸಿನಿಮಾ ಮಂದಿಗೆ ನಾನು ಎಚ್ಚರಿಕೆ ನೀಡಲು ಬಯಸುತ್ತೇನೆ. ಲಡ್ಡು ವಿಷಯದ ಬಗ್ಗೆ ಮಾತನಾಡುವುದಾದರೆ ಗಂಭೀರವಾಗಿ ಮಾತನಾಡಿ, ಇಲ್ಲವಾದರೆ ಮೌನವಾಗಿ ಇದ್ದು ಬಿಡಿ. ಅದನ್ನು ಬಿಟ್ಟು ನಿಮಗೆ ಅನಿಸಿದಂತೆ ಅಪಹಾಸ್ಯ ಮಾಡಿದರೆ ಮಾತ್ರ ಪ್ರಜೆಗಳು ನಿಮ್ಮನ್ನು ಕ್ಷಮಿಸರು’ ಎಂದಿದ್ದಾರೆ.
ಮುಂದುವರೆದು, ‘ಇದು ನಮಗೆ ಬಹಳ ತೀವ್ರವಾದ ನೋವು, ನೀವು ಲಡ್ಡು ಬಗ್ಗೆ ಜೋಕ್ ಮಾಡುತ್ತಿದ್ದೀರಿ. ನಿನ್ನೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸಹ ನೋಡಿದ್ದೀನಿ, ‘ಲಡ್ಡು ಸೆನ್ಸಿಟಿವ್ ಇಶ್ಯೂ’ ಎಂದಿದ್ದಾರೆ. ಹಾಗೆ ಮಾತನಾಡಬೇಡಿ, ಎಂದಿಗೂ ಹಾಗೆ ಮಾತನಾಡುವ ಧೈರ್ಯ ಮಾಡಬೇಡಿ. ನಿಮ್ಮನ್ನು ನಟರಾಗಿ ನಾನು ಗೌರವಿಸುತ್ತೀನಿ. ಆದರೆ ಸನಾತನ ಧರ್ಮದ ವಿಷಯ ಬಂದಾಗ ಸಾವಿರ ಬಾರಿ ಯೋಚನೆ ಮಾಡಿ ಮಾತನಾಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.