ತೆಲುಗು ಯೂಟ್ಯೂಬ್ರ್ ಹರ್ಷ ಸಾಯಿ ವಿರುದ್ಧ ಯುವತಿಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದಾರೆ. ಹರ್ಷ ಸಾಯಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ನನ್ನ ನಗ್ನ ಫೋಟೋ ಕ್ಲಿಕ್ಕಿಸಿ, ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮುಂಬೈ ಮೂಲದ ಯುವತಿ ನಟಿಯಾಗಿದ್ದು ಕೆಲ ವರ್ಷಗಳ ಹಿಂದೆ ಹೈದರಾಬಾದ್ಗೆ ಸಿನಿಮಾ ಅವಕಾಶಕ್ಕೆ ಬಂದಿದ್ದರು. ಬಳಿಕ ತೆಲುಗು ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಖಾಸಗಿ ಪಾರ್ಟಿಯಲ್ಲಿ ಹರ್ಷಸಾಯಿಯನ್ನ ಭೇಟಿಯಾಗಿದ್ದು, ಬಳಿಕ ಇಬ್ಬರ ಮಧ್ಯೆ ಸ್ನೇಹ ಬೆಳೆದು ಸಲುಗೆಯಿಂದ ಇರುತ್ತಿದ್ದರು. ಆದರೆ ಹರ್ಷ ಸಾಯಿ ಮದುವೆ ಆಗುವುದಾಗಿ ಹೇಳಿ, ತನ್ನನ್ನು ಬಳಸಿಕೊಂಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾರೆ. ಅಲ್ಲದೇ ಯುವತಿಯ ನಗ್ನ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಮಾಡಿ ಕೋಟಿ ಲೆಕ್ಕದಲ್ಲಿ ಹಣ ವಸೂಲಿ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಈ ಬಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಸ್ಟಾರ್ ಹರ್ಷ ಸಾಯಿ ಹಾಗೂ ಇವರ ತಂದೆ ರಾಧಕೃಷ್ಣ ವಿರುದ್ಧ ಕೇಸ್ ದಾಖಲಾಗಿದೆ. ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಯುವತಿಯನ್ನು ಕೊಂಡಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ಹರ್ಷ ಸಾಯಿ ಯೂಟ್ಯೂಬರ್ ಮೂಲಕ ಸಖತ್ ಫೇಮಸ್ ಆಗಿದ್ದನು. ಬಡವರಿಗೆ, ಮನೆ ಇಲ್ಲದವರಿಗೆ, ರಸ್ತೆ ಬದಿ ಇರುವವರಿಗೆ ಹೀಗೆ ನೂರಾರು ಜನಕ್ಕೆ ಹಣ ಕೊಟ್ಟು ಸಾಕಷ್ಟು ಖ್ಯಾತಿ ಗಳಿಸಿದ್ದಾನೆ. ಹರ್ಷ ಸಾಯಿ ಟಾಲಿವುಡ್ ಸಿನಿ ರಂಗಕ್ಕೂ ಎಂಟ್ರಿ ಕೊಟ್ಟು ಹೀರೋ ಆಗಿ ಒಂದು ಚಿತ್ರ ಕೂಡ ಶುರು ಮಾಡಿದ್ದರು. ಆದರೆ ಇದೀಗ ಅವರ ವಿರುದ್ಧ ಅತ್ಯಾಚಾರ ಪ್ರಕರಣ ಕೇಳಿ ಬಂದಿದೆ.