ಬೆಂಗಳೂರು: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಬಾಬು ರಾವ್ ಚಿಂಚನಸೂರು ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ನಿರಂತರ ಆಪರೇಷನ್ ಹಸ್ತದ ಮೂಲಕ ಬಿಜೆಪಿಗೆ ಕಾಂಗ್ರೆಸ್ ಏಟನ್ನು ನೀಡುತ್ತಿದ್ದರೆ, ಇದನ್ನು ತಡೆಯುವಲ್ಲಿ ಅಥವಾ ಪರ್ಯಾಯ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ನಾಯಕತ್ವ ವಿಫಲವಾಗುತ್ತಿದೆ.
ಇವರಷ್ಟೇ ಅಲ್ಲ ಸರಣಿ ಆಪರೇಷನ್ನಲ್ಲಿ ಮಾಜಿ ಶಾಸಕರು, ಪರಿಷತ್ ಸದಸ್ಯರು ಕಮಲ ತೊರೆದು ಕೈ ಹಿಡಿದಿದ್ದಾರೆ. ಜೊತೆಗೆ ಕೆಸಿ ನಾರಾಯಣ ಗೌಡ ಸೇರಿದಂತೆ ಮತ್ತೆ ಕೆಲವರು ಕಾಂಗ್ರೆಸ್ ನತ್ತ ವಲಸೆ ಬರುವ ಸಾಧ್ಯತೆ ಇದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಾಯಕತ್ವದ ಅವಧಿಯಲ್ಲಿ 17 ಮಂದಿಯನ್ನು ಆಪರೇಷನ್ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ದೊಡ್ಡ ರೀತಿಯ ಆಘಾತವನ್ನು ನೀಡಿದ್ದರು. ಸಮ್ಮಿಶ್ರ ಸರ್ಕಾರ ಪತನ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡುವಲ್ಲಿ ಈ ಆಪರೇಷನ್ ಪ್ರಮುಖ ಪಾತ್ರವನ್ನು ವಹಿಸಿತ್ತು.
ಆದರೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣ ಕಂಡುಬರುತ್ತಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿ ಉತ್ಸಾಹದಲ್ಲಿರುವ ಕಾಂಗ್ರೆಸ್ ಬಿಜೆಪಿಯ ಹಲವು ನಾಯಕರಿಗೆ ಬಲೆ ಹಾಕಿದೆ. ಆದರೆ, ಇದನ್ನು ತಡೆಯುವಲ್ಲಿ ಬಿಜೆಪಿ ವಿಫಲವಾಗುತ್ತಿದೆ. ಮತ್ತೊಂದು ಕಡೆಯಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋಗಿರುವ ವಲಸಿಗರ ಪೈಕಿ ಕೆಲವರ ನಡೆಯಂತೂ ಕುತೂಹಲ ಕೆರಳಿಸಿದೆ. ಆದರೆ ಇದನ್ನೆಲ್ಲಾ ನಿಭಾಯಿಸುವ ಹಾಗೂ ನಿರ್ವಹಿಸುವ ನಾಯಕತ್ವ ಬಿಜೆಪಿಯಲ್ಲಿ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಪಕ್ಷದೊಳಗಿನಿಂದಲೇ ಕೇಳಿಬರುತ್ತಿದೆ.
ಬಿಎಸ್ವೈ ನಾಯಕತ್ವ ನಂಬಿ ಹೋಗಿದ್ದ ವಲಸಿಗರು!
ಬಿಎಸ್ ಯಡಿಯೂರಪ್ಪ ಅವರು ಪಕ್ಷದ ನಾಯಕತ್ವ ವಹಿಸಿದ್ದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದರು. ಬಿಎಸ್ವೈ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆಯೂ ವಲಸಿಗರಲ್ಲಿ ಇತ್ತು. ಈ ಕಾರಣಕ್ಕಾಗಿಯೇ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರು ಕಮಲ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರು.
ಆದರೆ ಸದ್ಯಕ್ಕೆ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಹಲವು ಬದಲಾವಣೆಗಳು ಆಗಿವೆ. ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಅಯಕಟ್ಟಿನ ಸ್ಥಾನಮಾನವಿಲ್ಲ. ಪಕ್ಷದ ನಿರ್ಧಾರಗಳಲ್ಲಿ ಅವರ ಪಾತ್ರವೂ ಕಡಿಮೆ. ಆದರೆ ಅವರ ಹೊರತಾಗಿ ಇಂತಹ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುವ ಜವಾಬ್ದಾರಿಯನ್ನು ಯಾರೂ ಹೊರುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೆ ಇತರ ನಾಯಕರು ಯಾರೂ ಈ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಅಭಿಪ್ರಾಯವಿದೆ. ಪರಿಣಾಮ ಬಿಎಸ್ವೈ ಅವಧಿಯಲ್ಲಿ ಬಿಜೆಪಿ ಕಡೆ ಮುಖಮಾಡಿದ್ದ ನಾಯಕರು ಇದೀಗ ಮತ್ತೆ ಮಾತೃಪಕ್ಷಕ್ಕೆ ಮರಳಿ ಬರುವ ಪ್ರಯತ್ನ ನಡೆಸುತ್ತಿದ್ದಾರೆ.