ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುತ್ತಿದೆ. ಜೋ ಬೈಡನ್ ಅವಧಿಯಲ್ಲಿ ಭಾರತದೊಂದಿಗಿನ ಸಂಬಂಧ ವೃದ್ಧಿಯಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಶ್ವೇತಭವನ ತಿಳಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಂವಹನ ಸಲಹೆಗಾರ ಜಾನ್ ಕಿರ್ಬಿ, ‘ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಉತ್ತಮವಾಗಿದೆ’ ಎಂದರು.
‘ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬೈಡನ್ ತುಂಬಾ ಪ್ರಯತ್ನ ಮಾಡಿದ್ದಾರೆ. ನಮ್ಮ ನಡುವಿನ ಸಂಬಂಧವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿನ ನಮ್ಮ ಸಂಬಂಧವು ಭಾರತದ ನಾಗರಿಕರನ್ನು ಅಷ್ಟೇ ಅಲ್ಲದೆ, ಇಂಡೋ-ಫೆಸಿಫಿಕ್ ಭಾಗದ ಜನರಿಗೂ ರಕ್ಷಣೆ ನೀಡಲಿದೆ’ ಎಂದು ತಿಳಿಸಿದ್ದಾರೆ.
‘ಇಂಡೋ-ಪ್ಯಾಸಿಫಿಕ್ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಕ್ಕಾಗಿ ಮೋದಿ ಅವರನ್ನು ಬೈಡನ್ ಶ್ಲಾಘಿಸಿದ್ದಾರೆ. ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರಾಗಿರುವ ಅವರು ತಮ್ಮ ದೇಶದ ಸುತ್ತ-ಮುತ್ತಲಿನ ಸಮಸ್ಯೆಯನ್ನು ಅರಿತುಕೊಂಡಿದ್ದಾರೆ’ ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ವಿಶ್ವಸಂಸ್ಥೆಯಲ್ಲಿ ಮಂಗಳವಾರ ತಮ್ಮ ಕೊನೆಯ ಭಾಷಣ ಮಾಡಿದರು. ’50 ವರ್ಷಗಳ ಸಾರ್ವಜನಿಕ ಸೇವೆಯ ಬಳಿಕ ಹೊಸ ಪೀಳಿಗೆಗೆ ನಾಯಕತ್ವವವನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇನೆ. ನಾವೆಲ್ಲರೂ ಜನರ ಸೇವೆ ಮಾಡಲಿಕ್ಕೆ ಇರುವುದು’ ಎಂದರು.