ಕನ್ನಡ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ನಿಧನರಾಗಿ ನಾಲ್ಕು ವರ್ಷ ಕಳೆದಿದೆ. ಇದೀಗ ಎಸ್ ಪಿಬಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವಿಶೇಷ ಗೌರವ ನೀಡಿದ್ದಾರೆ. ಎಸ್ ಪಿಬಿ ಅವರ ನಾಲ್ಕನೇ ಪುಣ್ಯತಿಥಿಯಂದು ಚೆನ್ನೈನ ರಸ್ತೆ ಒಂದಕ್ಕೆ ಎಸ್ಪಿಬಿ ಅವರ ಹೆಸರನ್ನು ಇಟ್ಟಿದ್ದಾರೆ. ನಾಲ್ಕನೇ ಪುಣ್ಯತಿಥಿ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.
ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸುರವ ಎಸ್ ಪಿಬಿ ಅವರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. 16 ಭಾಷೆಗಳ ಹಾಡಿಗೆ ಅವರು ಧ್ವನಿ ಆಗಿದ್ದಾರೆ. ಅವರ ಧ್ವನಿಗೆ ಮಾರು ಹೋಗದವರೇ ಇಲ್ಲ. ಒಂದೇ ದಿನ ಹಲವು ಹಾಡುಗಳನ್ನು ರೆಕಾರ್ಡ್ ಮಾಡಿ ದಾಖಲೆ ಬರೆದಿದ್ದಾರೆ. ಸೆಪ್ಟೆಂಬರ್ 25ರಂದು ಅವರು ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಹೀಗಾಗಿ ಈ ಘೋಷಣೆ ಮಾಡಲಾಗಿದೆ.
‘ಹಲವು ಭಾಷೆಗಳಲ್ಲಿ ಎಸ್ಪಿಬಿ ಅವರು 40 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಅರ್ಧ ಶತಮಾನಗಳ ಕಾಲ ತಮಿಳು ಜನತೆಯನ್ನು ಅವರು ರಂಜಿಸಿದರು. ಹಾಡುವ ಮೂಲಕ, ಸಂಗೀತ ಸಂಯೋಜನೆ ಮಾಡುವ ಮೂಲಕ, ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಗಮನ ಸೆಳೆದರು. 2020ರ ಸೆಪ್ಟೆಂಬರ್ 25ರಂದು ಅವರು ನಮ್ಮನ್ನು ಅಗಲಿದರು. ಅವರು ಇಂದಿಗೂ ನಮ್ಮ ಹೃದಯದಲ್ಲಿ ಇದ್ದಾರೆ. ಹೀಗಾಗಿ, ಎಸ್ಪಿಬಿ ವಾಸ ಇದ್ದ ನುಂಗಂಬಾಕ್ಕಂ ಕಾಮ್ದಾರ್ ನಗರದ ಮುಖ್ಯರಸ್ತೆಗೆ ಎಸ್ಪಿ ಬಾಲಸುಬ್ರಹ್ಮಣ್ಯಂ ಸಲಾಯಿ (ರಸ್ತೆ) ಎಂದು ನಾಮಕರಣ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಬಾಲುವಿನ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಅವರು ವಾಸವಿದ್ದ ನಗರದ ಮುಖ್ಯ ರಸ್ತೆಗೆ ಅವರದ್ದೇ ಹೆಸರು ಇಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ’ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.