ತಿರುಪತಿ ಲಡ್ಡು ವಿವಾದದ ಬಳಿಕ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಸನಾಂಬ ಲಡ್ಡು ಪ್ರಸಾದಕ್ಕೂ ನಂದಿನಿ ತುಪ್ಪ ಬಳಕೆಗೆ ನಿರ್ಧರಿಸಲಾಗಿದೆ
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ಪ್ರಸಾದಕ್ಕೂ ನಂದಿನಿ ತುಪ್ಪ ಬಳಕೆಗೆ ನಿರ್ಧರಿಸಲಾಗಿದೆ.
ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲು ತಿಂಗಳು ಮಾತ್ರ ಬಾಕಿ ಇದೆ. ಹಾಸನಾಂಬ ಮಹೋತ್ಸವದಲ್ಲಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದಲೇ ತಯಾರಿಸಲು ನಿರ್ಧರಿಸಲಾಗಿದೆ. ಇದರ ಜವಾಬ್ದಾರಿಯನ್ನು ಬೆಂಗಳೂರಿನ ಇಸ್ಕಾನ್ ಸಂಸ್ಥೆಗೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ರಾಜ್ಯದಲ್ಲಿ ನಂದಿನಿ ತುಪ್ಪ, ಹಾಲು ಹಾಗೂ ಹಾಲಿನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಒಕ್ಕೂಟದಲ್ಲೂ ಬೇಡಿಕೆ ಹೆಚ್ಚಿದೆ. ತಿರುಪತಿ ಲಡ್ಡು ವಿವಾದದ ನಂತರದಲ್ಲಿ ಹಾಲಿನ ಉತ್ಪನ್ನದ ಬೇಡಿಕೆ ಹೆಚ್ಚಳವಾಗಿದೆ. ಈಗಾಗಲೇ ಧಾರ್ಮಿಕ ಧತ್ತಿ ಇಲಾಖೆಯ ದೇವಸ್ಥಾನಗಳಲ್ಲೂ ನಂದಿನಿ ತುಪ್ಪ ಬಳಕೆಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ಹೊಸದಾಗಿ ಡೀಲರ್ಸ್ಗಳು ಏಜೆನ್ಸಿಗಾಗಿ ಅರ್ಜಿ ಹಾಕುತ್ತಿದ್ದಾರೆ. ನಂದಿನಿ ಉತ್ಪನ್ನಗಳು ಮಾರಾಟಕ್ಕೆ ಸಾಲುತ್ತಿಲ್ಲ. ಒಟ್ಟಿನಲ್ಲಿ ತಿರುಪತಿ ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ