ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸೇರೆವಾಸ ಅನುಭವಿಸುತ್ತಿರುವ ದರ್ಶನ್ ಗೆ ಸಂಕಷ್ಟಗಳ ಸರ ಮಾಲೆಯೇ ಎದುರಾಗಿದೆ. ಜಾಮೀನಿಗೆ ಅರ್ಜಿ ಸಲ್ಲಿಸಿ ಜೈಲಿನಿಂದ ಹೊರ ಬರಲು ಎದುರು ನೋಡುತ್ತಿರುವ ದಾಸನಿಗೆ ಐಟಿ ಅಧಿಕಾರಿಗಳು ಸಖತ್ ಡ್ರಿಲ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಬಳಿಕ ಶವ ವಿಲೇವಾರಿ, ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಲಕ್ಷ ಲಕ್ಷ ಹಣ ನೀಡುವ ಭರವಸೆ ನೀಡಿದ್ದರು. ಈ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲೇ ಸುಮಾರು 7 ಗಂಟೆ ಕಾಲ ದರ್ಶನ್ ಗೆ ವಿಚಾರಣೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್ಗೆ ಕೇಳಿದ್ದಾರೆ.
ಐಟಿ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣೆ ಒಳಪಡಿಸುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಪರ ಅಡಿಟರ್ ಎಂ ಎಸ್ ರಾವ್ ಮತ್ತು ಅಸಿಸ್ಟೆಂಟ್ ಅರುಣ್ ಇಬ್ಬರು ಬೆಳಿಗ್ಗೆ 10:50 ಕ್ಕೆ ಜೈಲಿಗೆ ಬಂದಿದ್ದರು. ಎರಡು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಧ್ಯಾಹ್ನ 12:20ಕ್ಕೆ ಜೈಲು ಪ್ರವೇಶಿಸಿ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ವಿಚಾರಣೆ ನಡೆಸಿದರು.
ಕೊಲೆ ಪ್ರಕರಣದಲ್ಲಿ ಬಳಿಕೆಯಾದ ಒಟ್ಟು ಹಣದ ಬಗ್ಗೆ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಯಾವ ಅಕೌಂಟ್ಗಳ ಮೂಲಕ ಹಣ ವ್ಯವಹಾರ ನಡೆದಿದೆ ಎನ್ನುವದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಒಂದು ಮಾಹಿತಿ ಪ್ರಕಾರ ಶವದ ವಿಲೇವಾರಿ ವಿಚಾರವಾಗಿ 30 ಲಕ್ಷ ರೂ., ದರ್ಶನ್ ಮನೆಯಲ್ಲಿ ಸೀಜ್ ಆಗಿದ್ದ 40 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಸೀಜ್ ಆಗಿದ್ದ 3 ಲಕ್ಷ ರೂ., ಮೈಸೂರು ಹೊಟೇಲ್ನಲ್ಲಿ ಸೀಜ್ ಆಗಿದ್ದ 1 ಲಕ್ಷ ರೂ. ಸೇರಿ ಒಟ್ಟು 84 ಲಕ್ಷ ರೂ. ಹಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 12:30 ರಿಂದ ಸಂಜೆ 7:30ರವರೆಗೆ ನಿರಂತರವಾಗಿ 7 ತಾಸುಗಳ ಕಾಲ ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಹಣದ ಮೂಲದ ಬಗ್ಗೆ ದರ್ಶನ್ ವಿವರಣೆ ನೀಡಿದ್ದು ಅದಕ್ಕೆ ಸೂಕ್ತ ದಾಖಲೆಗಳನ್ನು ಆಡಿಟರ್ ಸಲ್ಲಿಸಿದ್ದಾರೆ ಎನ್ನಲಾಗಿದೆ.