ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನಗಲಿ ಕೆಲ ವರ್ಷಗಳೆ ಕಳೆದಿದೆ. ಆದರೆ ಅವರು ಮಾಡಿದ ಸೇವೆ, ಜನಗಳಿಗೆ ನೀಡುತ್ತಿದ್ದ ಪ್ರೀತಿಯ ಮೂಲಕ ಇಂದಿಗೂ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇದೀಗ ಹಾವೇರಿ ಜಿಲ್ಲೆಯ ಜಿಲ್ಲೆಯ ಯಲಗಚ್ಚ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದು ಇದನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಸಿದರು.
ಯಲಗಚ್ಚ ಗ್ರಾಮದ ಉಡಚ್ಚಮ್ಮ ದೇವಿಯ ದರ್ಶನ ಪಡೆದ ಅಶ್ವಿನಿಯವರನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಕುಂಬಮೇಳದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು 6 ಅಡಿ ಎತ್ತರದ ಅಪ್ಪು ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು.
ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ತಮ್ಮ ಮನೆಯ ಸ್ವಂತ ಜಾಗದಲ್ಲಿ ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನದಲ್ಲಿ ಪುನೀತ್ ರಾಜಕುಮಾರ್ ಮೂರ್ತಿ ಅನಾವರಣ ಮಾಡಿ, ಪ್ರಕಾಶ ಪುತ್ರಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಅಪ್ಪು ಮೂರ್ತಿಯನ್ನು ನೋಡಿದ ಅಶ್ವಿನಿ ಭಾವುಕರಾದರು.
ಅಭಿಮಾನಿ ಮನೆಯಲ್ಲಿ ಮಾತನಾಡಿದ ಅವರು, ಅದಕ್ಕೆ ಅಭಿಮಾನಿಗಳೇ ದೇವರು ಅನ್ನೋದು, ಇಂತಹ ಅಭಿಮಾನಿ ಸಿಕ್ಕಿರುವುದು ನಮ್ಮ ಪುಣ್ಯ. ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದು ನಮ್ಮ ಪುಣ್ಯ ಎಂದರು.
ಕಳೆದ ಎಂಟು ತಿಂಗಳಿನಿಂದ ಪ್ರಕಾಶ ಪಾದರಕ್ಷೆ ಧರಿಸದೇ ಕೆಲಸ ಮಾಡಿದ್ದು ಇಂದು ದೇವಸ್ಥಾನ ಉದ್ಘಾಟನೆಯಾದ ಬಳಿಕ ಪಾದರಕ್ಷೆ ಧರಿಸಿದರು. ಅಭಿಮಾನಿಗಳು ಪ್ರೀತಿಯಿಂದ ಕರೆದಿದ್ದಕ್ಕೆ ಬಂದು ದೇವಸ್ಥಾನ ಉದ್ಘಾಟನೆ ಮಾಡಿದ್ದಾರೆ. ನಮ್ಮ ಪಾಲಿನ ದೇವರು ನೀವು ಎಂದು ಅಭಿಮಾನಿ ಪ್ರಕಾಶ ಮತ್ತು ಕುಟುಂಬದ ಸದಸ್ಯರು ತಿಳಿಸಿದ್ದಾರೆ.