ಮಂಡ್ಯ :- ಮದ್ದೂರು ತಾಲ್ಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದ ಹೊರವಲಯದಲ್ಲಿ ಕುರಿ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಗುರುವಾರ ನಡೆದಿದೆ.
ವಡ್ಡರದೊಡ್ಡಿ ಗ್ರಾಮದ ಕೃಷ್ಣಮೂರ್ತಿ ಎಂಬುವರು ಗ್ರಾಮದ ಹೊರವಲಯದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಕುರಿಯೊಂದು ಮೇವು ತಿಂದು ಗುಂಡಿಯಲ್ಲಿ ನೀರು ಕುಡಿಯುತ್ತಿದ್ದ ವೇಳೆ ಚಿರತೆಯೊಂದು ದಿಢೀರ್ ದಾಳಿ ಮಾಡಿದೆ ಕುರಿಯ ಚಿರಾಟಕ್ಕೆ ರೈತ ಕೃಷ್ಣಮೂರ್ತಿ ಹಾಗೂ ಇತರರ ಕೂಗಾಟ ಶಬ್ದದಿಂದ ಬೆದರಿ ಚಿರತೆ ಪರಾರಿಯಾಗಿದ್ದು, ಅಷ್ಟರಲ್ಲಿ ಕುರಿ ಸಾವಿಗೀಡಾಗಿದೆಈ ಬಗ್ಗೆ ರೈತ ಕೃಷ್ಣಮೂರ್ತಿ ಮಾತನಾಡಿ, ಕುರಿಗಳನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ.
ಕಳೆದ 3 ತಿಂಗಳಲ್ಲಿ ನಮ್ಮ 8 ಕುರಿಗಳನ್ನು ಚಿರತೆ ಕೊಂದು ಹಾಕಿದೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ. ಅಲ್ಲದೇ, ವಡ್ಡರದೊಡ್ಡಿ, ಮಾರದೇವನಹಳ್ಳಿ, ಹೊಸಹಳ್ಳಿ ದೊಡ್ಡಿ ಹಾಗೂ ಕೋಲೂರು ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಚಿರತೆಗಳ ಸೆರೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.