ಸ್ಯಾಂಡಲ್ ವುಡ್ ನ ಖ್ಯಾತ ನಟ ದುನಿಯಾ ವಿಜಯ್ ಇದೀಗ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಸಲಗ ಹಾಗೂ ಭೀಮಾ ಸಿನಿಮಾ ಹಿಟ್ ಆದ ಬಳಿಕ ಇದೀಗ ಮತ್ತೋರ್ವ ಖ್ಯಾತ ನಟನಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ತಮ್ಮ ಹೊಸ ಸಿನಿಮಾಗೆ ”ಸಿಟಿ ಲೈಟ್ಸ್” ಎಂದು ಟೈಟಲ್ ಇಟ್ಟಿದ್ದಾರೆ.
ವಿಜಯ್ ಕುಮಾರ್ ಪುತ್ರಿ ಮೋನಿಷಾ ವಿಜಯ್ ಕುಮಾರ್ ನಟಿಸುತ್ತಿರುವ ಚೊಚ್ಚಲ ಚಿತ್ರವಿದು. ಕೆಲ ದಿನಗಳ ಹಿಂದೆ ಸಿಟಿ ಲೈಟ್ಸ್ ಅನೌನ್ಸ್ ಆಗಿದ್ದು, ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ತಮ್ಮ ಮಗಳ ಸಿನಿಮಾ ನಿರ್ದೇಶನದ ಮಾಡುತ್ತಿದ್ದು ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.
ಈ ಹಿಂದೆ ಸಲಗ ಹಾಗೂ ಭೀಮ ಅಂಥಹ ಮಾಸ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿಜಯ್, ವಿನಯ್ ರಾಜ್ ಕುಮಾರ್ ಜೊತೆಗೆ ಮಗಳು ಮೋನಿಷಾಳನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಲು ರೆಡಿಯಾಗಿದ್ದಾರೆ.
ಭೀಮ ಬಿಡುಗಡೆ ಸಂದರ್ಭ ದುನಿಯಾ ವಿಜಯ್ ಅವರು ವಿನಯ್ ರಾಜ್ಕುಮಾರ್ ಅವರನ್ನು ಸಕಲೇಶಪುರದ ಕಾಡಿಗೆ ಕರೆದುಕೊಂಡು ಹೋಗಿ ಪೆಪೆ ಸಿನಿಮಾದ ಬಗ್ಗೆ ಸಂದರ್ಶನ ಮಾಡಿದ್ದರು. ಇದೀಗ ದುನಿಯಾ ವಿಜಯ್ ಮಗಳ ಸಿನಿಮಾಗೆ ವಿನಯ್ ಹೀರೋ ಆಗಿದ್ದಾರೆ. ವಿಜಯ್ ಆಪ್ತರು ಹೇಳುವ ಹಾಗೇ ಈ ಬಾರಿ ಮಾಸ್ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಬಾರಿ ಲವ್ ಸ್ಟೋರಿ ಕಥೆ ಹೇಳಲಿದ್ದಾರೆ. ಈ ಹಿಂದೆ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದ ಸಲಗ ಹಾಗೂ ಭೀಮ ಸಿನಿಮಾಗಳು ನಮ್ಮ ನಡುವೆ ನಡೆಯುವ ಕಥೆ ಹೇಳಿತ್ತು. ಇದೀಗ ಸಿಟಿ ಲೈಟ್ಸ್ ಚಿತ್ರದ ಮೂಲಕ ನೈಜ ಘಟನೆಯನ್ನು ಸಿಲ್ವರ್ ಸ್ಕ್ರೀನ್ ಮೇಲೆ ತರಲು ವಿಜಯ್ ಸಜ್ಜಾಗುತ್ತಿದ್ದಾರೆ.