ಇಸ್ರೇಲ್ ಹಾಗೂ ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ದಾಳಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಶುಕ್ರವಾರ ಸಂಜೆ ಇಸ್ರೇಲಿ ವಾಯುಪಡೆಯು ಲೆಬನಾನ್ನ ರಾಜಧಾನಿ ಬೈರುತ್ನಲ್ಲಿ ಭಾರೀ ವಾಯು ದಾಳಿ ನಡೆಸಿದೆ. ಹಿಜ್ಬುಲ್ಲಾದ ಮುಖ್ಯ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿರುವುದಾಗಿ ಸೇನೆ ತಿಳಿಸಿದೆ.
ದಾಳಿಯ ಗುರಿಯು ಆ ಸಮಯದಲ್ಲಿ ಕಮಾಂಡ್ ಸೆಂಟರ್ನಲ್ಲಿದ್ದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಆಗಿದ್ದ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಸ್ರೇಲ್ಗೆ ದೃಢಪಡಿಸಿದರು. ಆದರೆ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 76 ಮಂದಿಗೆ ಗಾಯಗೊಂಡಿದ್ದಾರೆ.
ಇರಾನ್ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಪ್ರತಿದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇನೆಂದು ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಹೇಳಿದ್ದಾರೆ. ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
‘ಅವರು ಅಂತಹ ದಾಳಿಯಿಂದ ಬದುಕುಳಿದಿದ್ದಾರೆಂದು ಊಹಿಸಿಕೊಳ್ಳುವುದು ಅಸಾಧ್ಯ’ ಎಂದು ಸೇನಾ ಅಧಿಕಾರಿ ತಿಳಿಸಿದರು. ಹಲವಾರು ಹೀಬ್ರೂ ಮಾಧ್ಯಮ ವರದಿಗಳು ಭೂಗತ ಪ್ರಧಾನ ಕಚೇರಿಯ ಮೇಲಿನ ದಾಳಿಯಲ್ಲಿ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ಇಸ್ರೇಲಿ ವರದಿಗಳು ತಿಳಿಸಿವೆ. ದಾಳಿ ಬೆನ್ನಲ್ಲೇ ನಗರದ ಮೇಲೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ.
ಇಸ್ರೇಲ್ ದಾಳಿಯಲ್ಲಿ ಆರು ಕಟ್ಟಡಗಳು ಧ್ವಂಸಗೊಂಡಿವೆ ಎಂದು ಹಿಜ್ಬುಲ್ಲಾಗೆ ನಿಕಟವಾದ ಮೂಲವೊಂದು ತಿಳಿಸಿದೆ. ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಸುಮಾರು ಒಂದು ವರ್ಷದ ಸಂಘರ್ಷದಲ್ಲಿ ಬೈರುತ್ನಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ. ದಾಳಿಯಲ್ಲಿ ಸುಮಾರು ಟನ್ಗಳಷ್ಟು ಸ್ಫೋಟಕ ಬಾಂಬ್ಗಳು ಇದ್ದವು ಎಂದು ಇಸ್ರೇಲ್ ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.