ಚಿಕ್ಕಬಳಾಪುರ: ಸಂಸದ ಡಾ.ಕೆ ಸುಧಾಕರ್ ಅವರಿಗೆ ಕೇಂದ್ರ ಸರ್ಕಾರವು ಪ್ರಮುಖ ಹೊಣೆಗಾರಿಕೆ ವಹಿಸಿದೆ. ಕೇಂದ್ರ ಸರ್ಕಾರದಿಂದ ಹೊಸದಾಗಿ ಸಂಸದೀಯ ಸ್ಥಾಯಿ ಸಮಿತಿಗಳಿಗೆ ನೇಮಕಾತಿ ನಡೆದಿದ್ದು, ಈ ಪೈಕಿ ಡಾ.ಕೆ ಸುಧಾಕರ್ ಅವರನ್ನು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಡಾ.ಕೆ ಸುಧಾಕರ್ ಅವರು ಮೊದಲ ಬಾರಿಗೆ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದು,
ಈ ಅವಧಿಯಲ್ಲೇ ಅವರನ್ನು ಸ್ಥಾಯಿ ಸಮಿತಿಗೆ ನೇಮಿಸಿ ಮಹತ್ವದ ಹೊಣೆ ವಹಿಸಲಾಗಿದೆ. ಈ ಕುರಿತು ಸಂಸದ ಡಾ.ಕೆ ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ಸದಸ್ಯನಾಗಿ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆ ಮತ್ತು ಸಂತಸದ ವಿಷಯ. ಈ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ಹಿರಿಯ ನಾಯಕರಾದ ಅಮಿತ್ ಶಾ ಹಾಗೂ ಬಿ.ಎಲ್.ಸಂತೋಷ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.
2025ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ಸದಸ್ಯನಾಗಿ ನನ್ನದೇ ಆದ ಅಳಿಲು ಸೇವೆ ಸಲ್ಲಿಸಲು ಉತ್ಸುಕನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.