ಚೆನ್ನೈ: ಕಳೆದ ವರ್ಷ ಟಿ20 ಕ್ರೆಕೆಟ್ನಲ್ಲಿ (T20 Cricket) ಧೂಳೆಬ್ಬಿಸಿ, ಹಲವು ಅಂತಾರಾಷ್ಟ್ರೀಯ ದಾಖಲೆಗಳನ್ನ ಉಡೀಸ್ ಮಾಡಿದ ಟೀಂ ಇಂಡಿಯಾ (Team India) ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಈ ವರ್ಷ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಮೊದಲ ಎಸೆತಗಳಿಗೆ ಔಟಾಗಿದ್ದು, ಬೇಡದ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.
ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಬುಧವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾ ಬೌಲರ್ ಆಷ್ಟನ್ ಅಗರ್ ಸ್ಪಿನ್ ದಾಳಿಗೆ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಹಿಂದಿನ ಎರಡೂ ಪಂದ್ಯಗಳಕಲ್ಲೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಅವರ ಎಸೆತಗಳಿಗೆ ಎಲ್ಬಿಡಬ್ಲ್ಯೂಗೆ ತುತ್ತಾಗಿದ್ದರು.
ಬುಧವಾರ ನಡೆದ ಅಂತಿಮ ಪಂದ್ಯದಲ್ಲೂ ಒಂದೇ ಎಸೆತಕ್ಕೆ ಔಟಾಗುವ ಮೂಲಕ `ಹ್ಯಾಟ್ರಿಕ್ ಗೋಲ್ಡನ್ ಡಕ್’ ಆಗಿ ಬೇಡದ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.
1994ರಲ್ಲಿ ಸಚಿನ್ ತೆಂಡೂಲ್ಕರ್, 1996ರಲ್ಲಿ ಅನಿಲ್ಕುಂಬ್ಳೆ, 2003-04ರಲ್ಲಿ ಜಹೀರ್ ಖಾನ್, 2010ರಲ್ಲಿ ಇಶಾಂತ್ ಶರ್ಮಾ, 2017-19ರಲ್ಲಿ ಜಸ್ಪ್ರೀತ್ ಬುಮ್ರಾ ಏಕದಿನ ಕ್ರಿಕೆಟ್ನಲ್ಲಿ ಈ ಅಪಖ್ಯಾತಿ ಗಳಿಸಿದ್ದರು. 2023ರಲ್ಲಿ ಈ ಸಾಲಿಗೆ ಸೂರ್ಯಕುಮಾರ್ ಯಾದವ್ ಹೆಸರು ಸೇರ್ಪಡೆಯಾಗಿದೆ.
ಇದರಿಂದ ಸೂರ್ಯಕುಮಾರ್ ಯಾದವ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಬಹುತೇಕರು ಸೂರ್ಯಕುಮಾರ್ ಬದಲಿಗೆ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ದೀರ್ಘ ಸಮಯದ ಕಾಲ ಕ್ರಿಕೆಟ್ನಲ್ಲಿ ಸೂರ್ಯ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ 11 ಏಕದಿನ ಪಂದ್ಯಗಳಲ್ಲಿ 34 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಕಳೆದ 11 ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 9, 8, 4, 34, 6, 4, 31, 14, 0, 0, 0 ರನ್ ಗಳಿಸಿದ್ದಾರೆ. ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ರನ್ನು ಕೈಬಿಟ್ಟು ಟಿ20 ಮಾದರಿಯಲ್ಲಿ ಮಾತ್ರ ತಂಡದಲ್ಲಿ ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬುಧವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ನಿರ್ಣಾಯಕ ಪಂದ್ಯದಲ್ಲಿ ಆಸೀಸ್ ತಂಡ 49 ಓವರ್ಗಳಲ್ಲಿ 269 ರನ್ ಗಳಿಸಿತ್ತು. 270 ರನ್ ಗುರಿಪಡೆದ ಭಾರತ 49.1 ಓವರ್ಗಳಲ್ಲೇ ಆಲೌಟ್ ಆಗಿ, 21 ರನ್ಗಳಿಂದ ಸೋಲನುಭವಿಸಿತು.