ಲೆಬನಾನ್ನ ಹಮಾಸ್ ಬೆಂಬಲಿಸ್ತಿರೋ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ದಾಳಿಯಲ್ಲಿ ಹಿಜ್ಬುಲ್ಲಾದ ದೀರ್ಘಕಾಲದ ಮುಖ್ಯಸ್ಥ ಶೇಖ್ ಹಸನ್ ನಸ್ರಲ್ಲಾ ಮೃತಪಟ್ಟಿದ್ದಾಗಿ ಇಸ್ರೇಲ್ ಘೋಷಿಸಿದೆ. ನಸ್ರಲ್ಲಾ ಜೊತೆ ಆತನ ಪುತ್ರಿ ಝೈನಾಬ್ ನಸ್ರಲ್ಲಾ ಕೂಡ ಹತ್ಯೆಗೀಡಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ 32 ವರ್ಷಗಳಿಂದ ಉಗ್ರ ಹಿಜ್ಬುಲ್ಲಾ ಸಂಘವನ್ನು ಶೇಖ್ ಹಸನ್ ನಸ್ರಲ್ಲಾ ನಡೆಸುತ್ತಿದ್ದಾರೆ. ಇದೀಗ ಹತ್ಯೆಗೀಡಾಗಿದ್ದು ಮುಂದೆ ಹಿಜ್ಬುಲ್ಲಾ ಗುಂಪಿನ ಮುಂದಾಳತ್ವ ಯಾರು ವಹಿಸುತ್ತಾರೆ ಎಂಬ ಆತಂಕ ಶುರುವಾಗಿದೆ.
ಈ ಬಗ್ಗೆ ಇಸ್ರೇಲ್ ಸೇನೆ ಟ್ವೀಟ್ ಮಾಡಿದ್ದು, `ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲʼ ಅಂದಿದೆ. ಲೆಬನಾನ್ ರಾಜಧಾನಿ ಬೈರೂತ್ನ ದಕ್ಷಿಣದ ದಹಿಯೆಹ್ನಲ್ಲಿರುವ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ 5 ಗಂಟೆಗಳ ವೈಮಾನಿಕ ದಾಳಿಯಲ್ಲಿ ಸುಮಾರು ಟನ್ಗಳಷ್ಟು ಸ್ಫೋಟಕ ಬಾಂಬ್ಗಳನ್ನು ಬಳಸಿದೆ.
ಕಟ್ಟರ್ ಮೂಲಭೂತವಾದಿಯಾಗಿದ್ದ ನಸ್ರಲ್ಲಾ.. 1992ರಿಂದ ಹಿಜ್ಬುಲ್ಲಾದ ಮುಖ್ಯಸ್ಥನಾಗಿದ್ದು, ವಿಶ್ವದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದ. ಹಿಜ್ಬುಲ್ಲಾ ಸಂಘಟನೆ ಸೇರಿದವರಿಗೆ ಉಗ್ರ ತರಬೇತಿ ನೀಡುತ್ತಿದ್ದ. ಇರಾನ್ನಿಂದ ಕ್ಷಿಪಣಿ ತಂದು ಇಸ್ರೇಲ್ ಮೇಲೆ ದಾಳಿ ಮಾಡ್ತಿದ್ದ. ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಈವರೆಗೆ 11 ಉಗ್ರರನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಸೇನೆಯೇ ಫೋಟೋ-ಹುದ್ದೆ ಸಮೇತ ಟ್ವೀಟ್ ಮಾಡಿದೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಪುತ್ರಿ, ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮೊಹಮ್ಮದ್ ಅಲಿ ಇಸ್ಮಾಯಿಲ್, ಉಪ ಕಮಾಂಡರ್ ಹುಸೇನ್ ಅಹ್ಮದ್ ಇಸ್ಮಾಯಿಲ್ ಮೃತಪಟ್ಟಿದ್ದಾರೆ.
ಅಲಿ ಇಸ್ಮಾಯಿಲ್ ಇಸ್ರೇಲ್ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಗಳ ಹೊಣೆಗಾರನಾಗಿದ್ದ. ಇನ್ನು, ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ್ದಾರೆ. ಸಿರಿಯಾ, ಇರಾಕ್, ಇರಾನ್ ನಮಗೆ ಶಾಪ… ಭಾರತದ ಸ್ನೇಹ ನಮಗೆ ವರ ಅಂತ ಮ್ಯಾಪ್ ತೋರಿಸಿ ಮಾತಾಡಿದ್ದಾರೆ. ವೈಮಾನಿಕ ದಾಳಿ ಬೆನ್ನಲ್ಲೇ ಅಮೆರಿಕ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.