ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶ ತಲುಪಿ ಕೆಲ ದಿನಗಳೇ ಕಳೆದಿದೆ. ಇದೀಗ ಅವರನ್ನು ಕರೆತರಲು ಸ್ಪೇಸ್ ಎಕ್ಸ್ನ ‘ಡ್ಯ್ರಾಗನ್’ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ್ದು, ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಿದ್ದಾರೆ ಎಂದು ನಾಸಾ ತಿಳಿಸಿದೆ.
ಇದೇ ವರ್ಷ ಜೂನ್ನಲ್ಲಿ ಬೋಯಿಂಗ್ನ ‘ಸ್ಟಾರ್ ಲೈನರ್’ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಿದ್ದ ಸುನಿತಾ ಮತ್ತು ಬುಚ್, ತಾಂತ್ರಿಕ ದೋಷದಿಂದ ಭೂಮಿಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ನೌಕೆಯಲ್ಲಿ ಹೀಲಿಯಂ ಸೋರಿಕೆ ಉಂಟಾಗಿ ಒಂದು ವಾರದಲ್ಲೇ ಹಿಂತಿರುಗಬೇಕಾದ ಅವರು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು.
ಸುನಿತಾ ಮತ್ತು ಬುಚ್ ಅವರನ್ನು ಭೂಮಿಗೆ ಮರಳಿ ಕರೆತರುವ ಕಾರ್ಯಾಚರಣೆ ಪ್ರಾರಂಭಿಸಿರುವ ನಾಸಾ ಮತ್ತು ಸ್ಪೇಸ್ ಎಕ್ಸ್, ಶನಿವಾರ ಕ್ಯ್ರೂ-9 ಮಿಷನ್ ಪ್ರಾರಂಭಿಸಿತ್ತು. ಕೇಪ್ ಕ್ಯಾನವೆರಲ್ ಸ್ಪೇಸ್ ಫೋರ್ಸ್ ಕೇಂದ್ರದಿಂದ ಸ್ಪೇಸ್ ಎಕ್ಸ್ನ ‘ಡ್ಯ್ರಾಗನ್’ ವ್ಯೋಮ ನೌಕೆಯನ್ನು ಉಡ್ಡಯನ ಮಾಡಿತ್ತು.
ನಾಸಾದ ನಿಕ್ ಹೇಗ್ ಮತ್ತು ರಷ್ಯಾ ಬಾಹ್ಯಾಕಾಶ ಏಜೆನ್ಸಿಯ ಅಲೆಕ್ಸಾಂಡರ್ ಗೋರ್ಬುನೊವ್ ಅವರನ್ನು ಹೊತ್ತ ಡ್ರ್ಯಾಗನ್, ಮುಂದಿನ ವರ್ಷ ಫೆಬ್ರುವರಿ ತನಕ ಬಾಹ್ಯಕಾಶ ನಿಲ್ದಾಣದಲ್ಲಿ ಉಳಿಯಲಿದೆ. ನೌಕೆಯಲ್ಲಿ ಎರಡು ಖಾಲಿ ಆಸನಗಳನ್ನು ಸುನಿತಾ-ಬುಚ್ ಅವರಿಗೆ ಕಾಯ್ದಿರಿಸಲಾಗಿದೆ. ಕ್ಯ್ರೂ-8 ಮಿಷನ್ನ ನಾಲ್ವರು ಗಗನಯಾತ್ರಿಗಳು ಅಕ್ಟೋಬರ್ ಮೊದಲ ವಾರದಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ.