ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಇದನ್ನು ತಹಬದಿಗೆ ತರಲು ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಲು ಪಾಕ್ ಸರ್ಕಾರ ಮುಂದಾಗಿದೆ. ಈ ಕಾರಣದಿಂದ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಕಡಿತಗೊಳಿಸಲಾಗಿದ್ದು, ಆರು ಸಚಿವಾಲಯಗಳನ್ನು ಮುಚ್ಚಲಾಗಿದೆ. ಅಲ್ಲದೆ ಎರಡು ಸಚಿವಾಲಯಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ.
ಆರ್ಥಿಕ ಸಂಕಷ್ಟದಿಂದ ಪಾರಾಗಲು ಇತ್ತೀಚೆಗೆ ಐಎಂಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಪಾಕ್ ಸರ್ಕಾರಕ್ಕೆ ₹700 ಕೋಟಿ ಸಾಲವನ್ನು ನೀಡುವುದಾಗಿ ಹೇಳಿತ್ತು. ಇದರ ಭಾಗವಾಗಿ ಕಳೆದ ಸೋಮವಾರ (ಸೆ.26) ಮೊದಲ ಕಂತಿನಲ್ಲಿ ₹100 ಕೋಟಿ ಹಣವನ್ನು ನೀಡಲಾಗಿದೆ.
ಸಾಲ ನೀಡುವ ಮೊದಲು ಐಎಂಎಫ್ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅನಗತ್ಯ ವೆಚ್ಚಗಳಿಗೆ ಕಡಿವಾಣ, ತೆರಿಗೆ-ಜಿಡಿಪಿಗಳ ಅನುಪಾತ ಹೆಚ್ಚಳ, ಕೃಷಿ ಮತ್ತು ರಿಯಲ್ ಎಸ್ಟೇಟ್ಗಳ ಮೇಲೆ ತೆರಿಗೆ, ಸಬ್ಸಿಡಿಗಳ ಮೇಲೆ ಮಿತಿ ಹೇರಬೇಕು ಎನ್ನುವ ಷರತ್ತುಗಳು ಒಳಗೊಂಡಿವೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕ್ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್, ಐಎಂಎಫ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಷರತ್ತುಗಳಿಗೂ ಒಪ್ಪಿಗೆ ನೀಡಲಾಗಿದೆ. ತೆರಿಗೆ ಪಾವತಿಸದವರಿಗೆ ಇನ್ನು ಮುಂದೆ ಆಸ್ತಿ ಅಥವಾ ವಾಹನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ದೇಶದ ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಜತೆಗೆ ದೇಶದ ವಿದೇಶಿ ವಿನಿಮಯ ಸಂಗ್ರಹವು ಅತ್ಯಧಿಕ ಮಟ್ಟವನ್ನು ತಲುಪಿದೆ ಎಂದಿದ್ದರು.