ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಿರುವ ಬ್ರಿಟನ್, ಇಂಗ್ಲೆಂಡ್ನ ಮಿಡ್ಲ್ಯಾಂಡ್ಸ್ನಲ್ಲಿರುವ ಕೊನೆಯ ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ಮುಚ್ಚಿದೆ.
ಆ ಮೂಲಕ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಕೊನೆಗೊಳಿಸಿದ ಮೊದಲ ಜಿ7 ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ.
2015ರಲ್ಲಿ ಬ್ರಿಟನ್ ಹವಾಮಾನ ಬದಲಾವಣೆ ನಿಯಂತ್ರಿಸುವ ಗುರಿಯ ಮುಂದಿನ ಭಾಗವಾಗಿ ಕಲ್ಲಿದ್ದಲು ಸ್ಥಾವರಗಳನ್ನು ಮುಚ್ಚುವ ಯೋಜನೆಯನ್ನು ಘೋಷಿಸಿತ್ತು. ಆ ಸಮಯದಲ್ಲಿ ದೇಶದ ಸುಮಾರು ಶೇ 30ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲು ಸ್ಥಾವರಗಳಿಂದ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಕಲ್ಲಿದ್ದಲು ವಿದ್ಯುತ್ ಮೇಲಿನ ಅವಲಂಬನೆ ಶೇ1ಕ್ಕೆ ಕುಸಿದಿತ್ತು.
2035ರ ಒಳಗೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಬಗ್ಗೆ ಈ ವರ್ಷ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಇಂಧನ ಸಚಿವರು ಚರ್ಚಿಸಿದ್ದಾರೆ.