ವಿಜಯಪುರ: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನೀವು ಸ್ವಚ್ಛವಾಗಿರಿ.
ಅವರು ಕಳ್ಳರಿದ್ದಾರೆ ಇವರು ಕಳ್ಳರಿದ್ದಾರೆ ಎಂದು ನೀವು ಹಾಗೇ ಮಾಡಬೇಡಿ. ನೀವು ಸ್ವಚ್ಛವಾಗಿರಿ. ಮುಡಾ ವಿಚಾರದಲ್ಲಿ ನೀವು ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಬೊಫೋರ್ಸ್ ವಿಚಾರದಲ್ಲಿ ಎಲ್ಕೆ ಅಡ್ವಾನಿಯವರ ಹೆಸರು ಕೇಳಿ ಬಂದಿತ್ತು. ಕೇವಲ 50 ಲಕ್ಷ ರೂ. ಆರೋಪ ಬಂದಿತ್ತು. ಎಲ್ಕೆಎ ಎಂದು ಜೈನ್ ಡೈರಿಯಲ್ಲಿ ಬರೆಯಲಾಗಿತ್ತು. ಈ ಆರೋಪಕ್ಕೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಇದರಿಂದ ಮುಕ್ತವಾಗುವವರೆಗೆ ಸಂಸತ್ ಪ್ರವೇಶ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರು.ಅದು ಆದರ್ಶ. ರಾಜೀನಾಮೆ ನೀಡುವ ಮೂಲಕ ಸಿದ್ದರಾಮಯ್ಯ ರಾಜ್ಯಕ್ಕೆ ಹೊಸ ಆದರ್ಶವಾಗಬೇಕು.
ಇಲ್ಲವಾದರೆ ಅವರು ಸಹ ಯಡಿಯೂರಪ್ಪ ಅವರ ಹಾಗೇ ಆಗುತ್ತಾರೆ ಎಂದರು. ಅವರು ಸಿಎಂ ಆಗಿರೋದು ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಅವರ ವಿರುದ್ಧ ರಿಪೋರ್ಟ್ ಕೊಟ್ಟರೆ ವರ್ಗಾವಣೆ ಇಲ್ಲ ಸಸ್ಪೆಂಡ್ ಮಾಡುತ್ತಾರೆ. ಈ ಭಯದಲ್ಲಿ ಪಾರದರ್ಶಕವಾಗಿ ನಿಷ್ಪಕ್ಷಪಾತವಾಗಿ ಸರಿಯಾಗಿ ತನಿಖೆ ಮಾಡಲಾಗುವುದಿಲ್ಲ. ಸಿಎಂ ರಾಜೀನಾಮೆ ನೀಡಿದರೆ ನಿಷ್ಪಕ್ಷಪಾತವಾದ ತನಿಖೆ ಮಾಡಬಹುದು ಎಂದರು.