ಬೆಂಗಳೂರು: ಇತ್ತೀಚಿಗೆ ಎನ್ಐಎ ಅಧಿಕಾರಿಗಳು ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈ ಬೆನ್ನಲ್ಲೇ ಜಿಗಣಿ ಪೊಲೀಸರು ಜಿಗಣಿಯ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಓರ್ವ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳು ಅಕ್ರಮವಾಗಿ ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ರಾತ್ರಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು.
ಈ ವೇಳೆ ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳನ್ನ ಬಂಧಿಸಿದ ಪೊಲೀಸರು.
ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ರಷೀದ್ ಸಿದ್ದಿಕಿ ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು. ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿದ್ದಾನೆ. ಬಳಿಕ, ರಷೀದ್ ಸಿದ್ದಿಕಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2014ರಲ್ಲಿ ಅಕ್ರಮವಾಗಿ ದೆಹಲಿಗೆ ಬಂದಿದ್ದಾನೆ.
ಅಲ್ಲಿ, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಮಾಡಿಸಿಕೊಂಡಿದ್ದಾನೆ. ನಂತರ, 2018ರಲ್ಲಿ ಕುಟುಂಬ ಸಮೇತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದನು. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರು. ಸದ್ಯ ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಸಿದ್ದಾರೆ.