ಪ್ರವಾಸಿಗರು, ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರಿಗೆ ಅಮೆರಿಕವು ಹೆಚ್ಚುವರಿಯಾಗಿ 2.5 ಲಕ್ಷ ಮಂದಿಗೆ ವೀಸಾ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆ ಮಾಡಲಾದ ವೀಸಾ ವಿತರಣೆಯ ಹೊಸ ಸ್ಲಾಟ್ಗಳು ಭಾರತೀಯ ಅರ್ಜಿದಾರರಿಗೆ ಸಕಾಲಿಕವಾಗಿ ಸಂದರ್ಶನಕ್ಕೆ ಹಾಜರಾಗಲು ನೆರವಾಗಲಿವೆ. ಅಲ್ಲದೆ, ಉಭಯ ದೇಶಗಳ ಬಾಂಧವ್ಯ ವೃದ್ಧಿಯನ್ನು ಸುಗಮಗೊಳಿಸಲಿದೆ ಎಂದು ಅಮೆರಿಕದ ರಾಯಭಾರ ಕಚೇರಿ ತಿಳಿಸಿದೆ.
‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಅವರು ಉಭಯ ದೇಶಗಳ ನಡುವಿನ ವೀಸಾ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಚುರುಕುಗೊಳಿಸಲು ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದಾರೆ. ರಾಯಭಾರ ಕಚೇರಿಯಲ್ಲಿನ ನಮ್ಮ ಕಾನ್ಸುಲರ್ ತಂಡಗಳು ಮತ್ತು ನಾಲ್ಕು ದೂತಾವಾಸಗಳು, ಹೆಚ್ಚುತ್ತಿರುವ ವೀಸಾ ಬೇಡಿಕೆಯನ್ನು ಈಡೇರಿಸಲು ಅವಿರತವಾಗಿ ಕೆಲಸ ಮಾಡುತ್ತಿವೆ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.