ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಬೇಗ ಎದ್ದೇಳುವುದರಿಂದ ಸುಸ್ತಾಗುತ್ತಾರೆ. ಮತ್ತೆ ಕೆಲವರು ಬೇಗ ಎದ್ದೇಳುವುದೇ ಇಲ್ಲ. ಮುಂಜಾನೆ ಬೇಗ ಏಳುವುದನ್ನು ಒಳ್ಳೆಯ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿದೆ.
ಯಾರಾದರೂ ಕೇಳಬಹುದು ಅಯ್ಯೋ ಏಳೋದ್ರಿಂದನೇ ಎಲ್ಲ ಸರಿಯಾಗೋದಾಗಿದ್ರೆ ಹೀಗೆ ಇರ್ತಿತ್ತಾ ಜಗತ್ತು. ಎಲ್ಲ ಬೇಗ ಎದ್ದು ಎಲ್ಲವನ್ನೂ ಸರಿಮಾಡುತ್ತಿದ್ದರು ಅಂತ. ಆದರೆ ಏಳುವ ಸಮಯ, ಕ್ರಮದಲ್ಲಿ ಇದೆಲ್ಲವೂ ನಿರ್ಣಯವಾಗಿರುತ್ತದೆ ಎಂಬ ಸತ್ಯವು ಗೊತ್ತಿಲ್ಲ
ಅರುಣೋಯದಲ್ಲಿ ಏಳಬೇಕು. ಅಂದರೆ ಸೂರ್ಯೋದಯಕ್ಕಿಂತ ಎರಡು ಮುಹೂರ್ತಗಳ ಮೊದಲು. ಒಂದು ಮುಹೂರ್ತ ಎಂದರೆ ಈಗಿನ ಗಂಟೆಯ ಪ್ರಕಾರ ನಲವತ್ತೆಂಟು ನಿಮಿಷಗಳ ಅವಧಿ. ಅಂದರೆ 96 ನಿಮಿಷಗಳು. ಸೂರ್ಯೋದಯಕ್ಕಿಂತ ಒಂದೂವರೆ ತಾಸು ಮೊದಲು ಏಳಬೇಕು. ಆರು ಗಂಟೆಗೆ ಸೂರ್ಯೋದಯವಾದರೆ ಅದಕ್ಕಿಂತ ಒಂದೂವರೆ ತಾಸು ಎಂದರೆ ನಾಲ್ಕೂವರೆಗೆ ಏಳಬೇಕು. ಇದನ್ನು ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಸಹಜವಾಗಿ ಎಚ್ಚರಗೊಂಡು ಎದ್ದರೆ ಉತ್ತಮ. ಅದಿಲ್ಲದೇ ಹೋದರೆ ಅಲರಾಮ್ ಇಟ್ಟುಕೊಂಡು ಎಚ್ಚರಗೊಳ್ಳಲೂಬಹುದು. ಇದು ಮಧ್ಯಮ. ಒಟ್ಟಿನಲ್ಲಿ ಆ ಸಮಯಕ್ಕೆ ಏಳಬೇಕು ಎನ್ನುವುದು ಕ್ರಮ. ಇದು ದೇವರು ಮನುಷ್ಯರಿಗೆ ನಿರ್ಮಿಸಿಕೊಡುವ ದಿವ್ಯ ಕಾಲ.
ಹಾಗಿದ್ದರೆ ಏಳುವುದು ಹೇಗೆ?
ಎಚ್ಚರವಾದ ಮೇಲೆ ಹೇಗೆ ಎದ್ದರೇನು ಅಲ್ವಾ? ಅದಕ್ಕೂ ನಿಯಮ ಬೇಕಾ? ಇದೆಲ್ಲ ವರ್ಕ್ ಆಗತ್ತಾ? ಸುಮ್ಮನೇ ಇಂತಹದ್ದನ್ನೆಲ್ಲಾ ಏಕೆ ಹೇಳುತ್ತಾರೆ ಎಂದೆಲ್ಲ ಕೇಳಬಹುದು. ಆದರೆ ಏಳುವುದಕ್ಕೂ ನಿಯಮವಿದೆ. ನೀವು ರಾತ್ರಿ ನಿದ್ರೆಯಲ್ಲಿ ಹೇಗೆ ಬೇಕಾದರೂ ಮಲಗಿ. ಆದರೆ ನೀವು ಏಳುವಾಗ ಬಲ ಮಗ್ಗುಲಾಗಿಯೇ ಏಳಬೇಕು. ಯಾಕೆ ಹಾಗೆ? ಎಡಮಗ್ಗುಲಲ್ಲಿ ಎದ್ದರೆ ಎಡಪಂಥೀಯರಾಗುತ್ತೇವಾ? ಬಲಪಂಥದವರು ಮಾತ್ರ ಬಲ ಭಾಗಕ್ಕೆ ಏಳಬೇಕಾ? ಎಂದೆಲ್ಲ ಪ್ರಶ್ನೆಗಳು ಬರಬಹುದು. ಅಷ್ಟು ಮಾತ್ರ ಸಾಕಾ ಎಂದರೆ, ಹಾಗೆ ಮಾಡಲು ಒಂದು ಕಾರಣವಿರುತ್ತದೆ. ಉಸಿರಾಟವು ಇದಕ್ಕೆ ಮೂಲ ಕಾರಣವಾಗಿರುತ್ತದೆ.
ಎಲ್ಲರಿಗೂ ಮೂಗು ಎರಡೇ ಇರುವುದು. ಆದರೆ ಈ ಎರಡೂ ಮೂಗಿನಲ್ಲಿ ಒಂದೇ ಸಮನೆ, ಒಂದೇ ಸಮಾನವಾಗಿ ಉಸಿರಾಡುವುದಿಲ್ಲ. ಹೆಚ್ಚು ಕಾಲ ಉಸಿರಾಡುವುದು ಯಾವುದಾದರೂ ಒಂದು ಮೂಗಿನಲ್ಲಿ ಮಾತ್ರ. ಒಂದಾದ ಅನಂತರ ಒಂದರಲ್ಲಿ ನಮ್ಮ ಉಸಿರಾಟವಿರಲಿದೆ. ಬೆಳಗಿನ ಹೊತ್ತಿನಲ್ಲಿ ಏಳುವಾಗ ಎಡ ಮೂಗಿನಿಂದ ಉಸಿರಾಟವಾಗಬೇಕು ಎನ್ನುವುದು ನಮ್ಮ ಅಪೂರ್ವ ವಿಜ್ಞಾನಿಗಳಾದ ಋಷಿಗಳು ಕಂಡುಕೊಂಡ ಸತ್ಯ. ಏಕೆಂದರೆ ಅದು ನಾವು ಮುಂದೆ ಮಾಡಲಿರುವ ಕರ್ಮಕ್ಕೆ ಪೂರಕವಾದ ಮನಸ್ಸನ್ನು ಕಲ್ಪಿಸಿಕೊಡಲಿದೆ
ಎಡ ಮೂಗಿನಿಂದ ಉಸಿರಾಡುವಾಗ ಮಾಡಬೇಕಾದ ಕೆಲಸ, ಬಲ ಮೂಗಿನಲ್ಲಿ ಮಾಡಬೇಕಾದ ಕೆಲಸಗಳು ಇರುತ್ತವೆ. ಸೌಮ್ಯವಾದ ಕೆಲಸವನ್ನು ಎಡ ಮೂಗಿನಲ್ಲಿ ಉಸಿರಾಡುವಾಗ, ಉಗ್ರವಾದ ಕೆಲಸವನ್ನು ಮಾಡಲು ಬಲ ಮೂಗಿನಿಂದ ಉಸಿರಾಡಬೇಕಾಗುತ್ತದೆ. ಬೆಳಗ್ಗೆ ಎದ್ದು ಯಾವ ಸಾಹಸ ಕಾರ್ಯಕ್ಕೂ ಹೋಗಬೇಕಿಲ್ಲ. ಹಾಗಾಗಿ ಬಲ ಮಗ್ಗುಲಾದಾಗ ಉಸಿರಾಟವು ಎಡ ಮೂಗಿನಿಂದ ಆಗುವ ಕಾರಣ ಈ ಕ್ರಮವನ್ನು ಪ್ರಾಚೀನ ಕಾಲದಲ್ಲಿ ತಂದರು. ಬಲಕ್ಕೆ ಹೊರಳಿದಾಗ ಉಸಿರಾಟವು ಎಡಕ್ಕೆ ಬದಲಾಗುತ್ತದೆ ಎಂಬುದು ನಿತ್ಯ ಸತ್ಯದ ವಿಚಾರ.
ಹೀಗೆ ವೈಜ್ಞಾನಿಕ ಹಿನ್ನೆಲೆಯು ಭಾರತೀಯರ ವಿಶೇಷತೆಗಳಲ್ಲಿ ಒಂದು. ಇಲ್ಲಿನ ಆಚರಣೆಗಳಿಗೆ ಸಕಾರಾತ್ಮಕ ದೃಷ್ಟಿಕೋನವು ಇರುತ್ತದೆ. ಆ ದೃಷ್ಟಿಯಿಂದ ನೋಡಿದಾಗ ಅವರು ಕಂಡಿದ್ದನ್ನು ನಾವೂ ಕಣಬೇಕಷ್ಟೇ. ಅದಿಲ್ಲವಾದರೆ ಎಲ್ಲವೂ ವ್ಯತ್ಯಾಸವಾಗಿ ಕಾಣಬಹುದು. ಅಥವಾ ಕಾಣಬೇಕಾದದ್ದು ಕಾಣದೆಯೇ ಹೋಗಬಹುದು ಎನ್ನಲಾಗಿದೆ.