ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು ಈ ವೇಳೆ ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂದಿದ್ದಾರೆ.
ನೆತನ್ಯಾಹು ಅವರೊಂದಿಗಿನ ಮಾತುಕತೆಯ ವಿವರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಪ್ರಾದೇಶಿಕ ಉದ್ವಿಗ್ನ ಸ್ಥಿತಿಯನ್ನು ತಡೆಗಟ್ಟುವುದು ಮತ್ತು ಎಲ್ಲಾ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.
ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಬದ್ಧ ಎಂದು ಮೋದಿ ಹೇಳಿದ್ದಾರೆ. ಆದರೆ ಮೋದಿ ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸಿಲ್ಲ. ಕಳೆದ ವಾರ ಲೆಬನಾನ್ನಲ್ಲಿ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇಸ್ರೇಲಿ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಏಳು ಉನ್ನತ ಶ್ರೇಣಿಯ ಕಮಾಂಡರ್ಗಳು ಮತ್ತು ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ.