ಬೆಂಗಳೂರು: ರಾಯರ ದರ್ಶನಕ್ಕೆ ಹೋದವರ ಮನೆ ಕಳ್ಳತನ ಮಾಡಿ, ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲು ಹೊರಟಿದ್ದ. ಒಂದೂವರೆ ಕೆ.ಜಿ ಚಿನ್ನ ಕದ್ದಿದ್ದ ಖತರ್ನಾಕ್ ಕಳ್ಳನ ಗ್ಯಾಂಗ್ ಅನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಸನ್ಯಾಸಿ ನಂದೀಶ್, ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳಾಗಿದ್ದು, ಮನೆಗೆಲಸದವರ ಮಾತನ್ನ ಕದ್ದು ಕೇಳಿಸಿಕೊಂಡವನು ಕಳ್ಳತನಕ್ಕೆ ಇಳಿದಿದ್ದ.
ಖತರ್ನಾಕ್ ಪ್ಲ್ಯಾನ್ ಮಾಡಿಯೂ 12 ಗಂಟೆಯೊಳಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮನೆಯವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ ಎಂದು ಕೆಲಸದವರು ಮಾತಾಡಿದ್ದರು. ಇದನ್ನ ಪಕ್ಕದಲ್ಲೇ ನಿಂತು ಸನ್ಯಾಸಿ ಮಠ ನಂದೀಶ ಕೇಳಿಕೊಂಡಿದ್ದ. ಈ ವಿಚಾರವನ್ನು ತನ್ನ ಸ್ನೇಹಿತರಿಗೆ ಹೇಳಿ ಕಳ್ಳತನಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಮನೆಯವರು ಮಂತ್ರಾಲಯಕ್ಕೆ ಹೊರಡುತ್ತಿದ್ದಂತೆ ಮನೆ ಬಳಿ ಕಾದು ಕುಳಿತಿದ್ದ ಈ ಕಿಡಿಗೇಡಿಗಳು, ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಮನೆಯಲ್ಲಿದ್ದ 1ಕೆ.ಜಿ 800 ಗ್ರಾಂ ಚಿನ್ನ ಎಗರಿಸಿ ಕಾಲ್ಕಿತ್ತಿದ್ದರು.
ಮನೆ ಮಾಲೀಕರು ಮಂತ್ರಾಲಯದಿಂದ ವಾಪಸು ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ಆಧಾರಿಸಿ ಆರೋಪಿಗಳ ಜಾಡು ಹಿಡಿದಿದ್ದ ಪೊಲೀಸರು, ಧರ್ಮಸ್ಥಳ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1ಕೆಜಿ 800 ಗ್ರಾಂ ಚಿನ್ನ ಸೇರಿ 18 ಸಾವಿರ ನಗದು ವಶಕ್ಕೆ ಪಡೆದು, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.