ಸೂಪರ್ ಸ್ಟಾರ್ ರಜನಿಕಾಂತ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಕಾಏಕಿ ನೆಚ್ಚಿನ ನಟನನ್ನು ಅಡ್ಮಿಟ್ ಮಾಡಿದ್ದು ತಿಳಿದು ಅಭಿಮಾನಿಗಳು ಕಂಗಾಲಾಗಿದ್ದರು. ಇದೀಗ ಆಸ್ಪತ್ರೆ ಮೂಲಗಳು ರಜನಿಕಾಂತ್ ಅವರಿಗೆ ಏನಾಗಿದೆ ಎಂಬುದನ್ನು ತಿಳಿಸಿದ್ದಾರೆ.
‘ಸೂಪರ್ ಸ್ಟಾರ್’ ರಜನಿಕಾಂತ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟೆಂಟ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೆ.30ರಂದು ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತನಾಳದಲ್ಲಿ ಊತ ಕಾಣಿಸಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಹಿರಿಯ ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಸ್ಟೆಂಟ್ ಹಾಕಿದ್ದು ಸದ್ಯ ರಜನಿಕಾಂತ್ ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಕಡೆಯಿಂದ ಹೆಲ್ತ್ ಅಪ್ಡೇಟ್ ನೀಡಲಾಗಿದೆ.
ಆದಷ್ಟು ಬೇಗ ರಜನಿಕಾಂತ್ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ‘ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು ದಿನಗಳಲ್ಲಿ ಅವರು ಮನೆಗೆ ತೆರಳಲಿದ್ದಾರೆ’ ಎಂದು ಕೂಡ ಆಸ್ಪತ್ರೆಯ ಕಡೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಷಯ ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ರಜನಿಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು. ವಯೋ ಸಹಜವಾಗಿ ಅವರು ಒಂದಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದರಿಂದ ಎಲ್ಲರಿಗೂ ಆತಂಕ ಹೆಚ್ಚಿತ್ತು. ಸದ್ಯ ಕೆಲವು ದಿನಗಳ ಕಾಲ ರಜನಿಕಾಂತ್ ಅವರು ಸಿನಿಮಾದ ಕೆಲಸಗಳಿಗೆ ಬ್ರೇಕ್ ನೀಡಲಿದ್ದಾರೆ. ಸಂಪೂರ್ಣ ಗುಣಮುಖರಾದ ನಂತರವೇ ಅವರು ಸಿನಿಮಾದ ಕೆಲಸಗಳತ್ತ ಮರಳಿದ್ದಾರೆ.
‘ವೆಟ್ಟಯ್ಯನ್’, ‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಅಕ್ಟೋಬರ್ 10ರಂದು ‘ವೆಟ್ಟಯ್ಯನ್’ ಸಿನಿಮಾ ಬಿಡುಗಡೆ ಆಗಲಿದೆ. ಇನ್ನೇನು ಅವರು ಈ ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಬೇಕು ಎನ್ನುವಾಗಲೇ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದೆ. ಸದ್ಯ ವಿಶ್ರಾಂತಿಯಲ್ಲಿರೋ ರಜನಿಕಾಂತ್ ಸದ್ಯದಲ್ಲೇ ಮತ್ತೆ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.