ಟೆಹ್ರಾನ್ (ಇರಾನ್): ವಾಯುವ್ಯ ಇರಾನ್ನಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ 165 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಪಶ್ಚಿಮ ಅಜರ್ಬೈಜಾನ್ ಪ್ರಾಂತ್ಯದ ಖೋಯ್ ಕೌಂಟಿ ಬಳಿ ಸ್ಥಳೀಯ ಕಾಲಮಾನ 6:46 ಗಂಟೆಗೆ ಸಂಭವಿಸಿದ ಭೂಕಂಪವು 8 ಕಿಮೀ ಆಳವನ್ನು ಹೊಂದಿದೆ ಎಂದು ಇರಾನ್ನ ಅಧಿಕೃತ ಸುದ್ದಿ ಸಂಸ್ಥೆ IRNA ಗೆ ಇರಾನಿನ ಭೂಕಂಪನ ಕೇಂದ್ರ ತಿಳಿಸಿದೆ ಎಂದು ವರದಿ ಮಾಡಿದೆ.
ಗಾಯಗೊಂಡ 165 ಮಂದಿಯಲ್ಲಿ, 139 ಮಂದಿಯನ್ನು ಪ್ರಥಮ ಚಿಕಿತ್ಸೆ ಪಡೆದ ನಂತರ ವೈದ್ಯಕೀಯ ಕೇಂದ್ರಗಳಿಂದ ಡಿಸ್ಚಾರ್ಜ್ ಮಾಡಲಾಗಿದೆ. ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಶ್ಚಿಮ ಅಜರ್ಬೈಜಾನ್ನ ಪ್ರಾಂತೀಯ ಗವರ್ನರ್ ಮೊಹಮ್ಮದ್-ಸಾಡೆಕ್ ಮೊಟಮೆಡಿಯನ್ ಹೇಳಿರುವುದಾಗಿ IRNA ವರದಿ ಮಾಡಿದೆ.
ಸಲ್ಮಾಸ್ ಮತ್ತು ಖೋಯ್ ಕೌಂಟಿಗಳಲ್ಲಿನ 10 ಹಳ್ಳಿಗಳಲ್ಲಿ 80 ವಸತಿ ಘಟಕಗಳು ಭೂಕಂಪದಲ್ಲಿ ಹಾನಿಗೊಳಗಾಗಿವೆ ಎಂದು ಪಶ್ಚಿಮ ಅಜರ್ಬೈಜಾನ್ನ ಹೌಸಿಂಗ್ ಫೌಂಡೇಶನ್ನ ಡೈರೆಕ್ಟರ್ ಜನರಲ್ ಜಾಫರ್ ಬರ್ಜೆಗರ್ IRNA ಗೆ ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.