ಜಪಾನ್ ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ ಡಿಪಿ) ನಾಯಕ ಶಿಗೆರು ಇಶಿಬಾ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ಇಶಿಬಾ ಅವರನ್ನು ಆಯ್ಕೆ ಮಾಡಲಾಗಿದ್ದು ಇಶಿಬಾ ಅವರು ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಜಪಾನ್ ಸಂಸತ್ತಿನ ಕೆಳ ಮತ್ತು ಮೇಲ್ಮನೆ ಎರಡರಲ್ಲೂ ಪ್ರಧಾನಿ ಸ್ಥಾನಕ್ಕಾಗಿ ಕಳೆದ ವಾರ ಎಲ್ಡಿಪಿ ಅಧ್ಯಕ್ಷ ಸ್ಥಾನವನ್ನು ಗೆದ್ದ ಇಶಿಬಾ ಅವರ ಹೆಸರನ್ನು ಅನುಮೋದಿಸಿದವು.
ಹಗರಣಗಳಿಂದ ಕುಖ್ಯಾತಿ ಪಡೆದಿರುವ ಎಲ್ಡಿಪಿಯ ಮೇಲೆ ಮತದಾರರ ವಿಶ್ವಾಸವನ್ನು ಪುನಃಸ್ಥಾಪಿಸಲು ಇಶಿಬಾ ಬಹಳ ಶ್ರಮಪಡಬೇಕಾಗಲಿದೆ. ಹೀಗಾಗಿ ಅವರ ಅಧಿಕಾರಾವಧಿಯು ಬಹಳಷ್ಟು ಸವಾಲುಗಳಿಂದ ಕೂಡಿತ್ತು. ಕಳೆದ ವಾರ ನಡೆದ ಚುನಾವಣೆಯಲ್ಲಿ ಆರ್ಥಿಕ ಭದ್ರತಾ ಸಚಿವ ಸನೇ ತಕೈಚಿ ಅವರನ್ನು ಸೋಲಿಸುವ ಮೂಲಕ ಇಶಿಬಾ ತಮ್ಮ ಐದನೇ ಪ್ರಯತ್ನದಲ್ಲಿ ಎಲ್ಡಿಪಿ ನಾಯಕನಾಗಿ ಜಯ ಘಳಿಸಿದರು. ಇಶಿಬಾ 215 ಮತಗಳನ್ನು ಗಳಿಸಿ 194 ಮತ ಪಡೆದ ತಕೈಚಿ ಅವರನ್ನು ಹಿಂದಿಕ್ಕಿದರು.
ಇದಕ್ಕೂ ಮುನ್ನ ಸೋಮವಾರ, ಇಶಿಬಾ ಅಕ್ಟೋಬರ್ 9ರಂದು ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಯೋಜನೆಯನ್ನು ಘೋಷಿಸಿದರು. ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಹಠಾತ್ ಚುನಾವಣೆಗೆ ಕರೆ ನೀಡಿದ ಅವರ ನಿರ್ಧಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಅಧಿಕೃತವಾಗಿ ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲೇ ಇಂಥ ಘೋಷಣೆ ಮಾಡುವುದು ಅಗೌರವ ಮತ್ತು ಅಸಂವಿಧಾನಿಕ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.
ಶಿಗೆರು ಇಶಿಬಾ ತಾವು ಜಪಾನಿನ ಆಡಳಿತ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾದ ಕೇವಲ ಮೂರು ದಿನಗಳ ನಂತರ ಅಕ್ಟೋಬರ್ 27 ರಂದು ಚುನಾವಣೆ ನಡೆಸುವುದಾಗಿ ಹಠಾತ್ ಘೋಷಿಸಿದ್ದಾರೆ.
ಶುಕ್ರವಾರದ ನಾಯಕತ್ವದ ಚುನಾವಣೆಯಲ್ಲಿ ಗೆದ್ದ ನಂತರ, ಇಶಿಬಾ ಅವರು ಜಪಾನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದಾಗಿ, ಭದ್ರತಾ ಅಪಾಯಗಳನ್ನು ಪರಿಹರಿಸುವುದಾಗಿ, ಸಾರ್ವಜನಿಕ ಹಗರಣಗಳು ಮತ್ತು ಆಂತರಿಕ ಸಂಘರ್ಷಗಳಿಂದಾಗಿ ಹೆಸರು ಕೆಡಿಸಿಕೊಂಡಿರುವ ಎಲ್ಡಿಪಿ ಪಕ್ಷವನ್ನು ಸ್ವಚ್ಛಗೊಳಿಸುವುದಾಗಿ ಹೇಳಿದರು.