ಜ್ಯೋತಿಷ್ಯ ನಂಬುವವರಿಗಾಗಿ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಬಂದಂತಹ ಆಚರಣೆಗಳನ್ನು ಅನುಸರಿಸುವರಿಗಾಗಿ… ಇನ್ನೇನು ಮಹಾಲಯ ಅಮವಾಸೆ.. ಇದನ್ನು ಒಮ್ಮೆ ಪಾಲಿಸಬಾರದೇಕೇ… ಪಿತೃಪಕ್ಷ.. ಅಂದರೆ ಏನು? ಯಾಕೆ ಆಚರಣೆ ಮಾಡಬೇಕು.. ನಮ್ಮ ಸಂಸ್ಕೃತಿ ಯಲ್ಲಿ ಬಂದ ಆಚಾರ, ವಿಚಾರಗಳ ಬಗ್ಗೆ..
ಒಮ್ಮೆ ಓದಿ ನೋಡಿ…
ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತ:l
ನಿತ್ಯ ಸನ್ನಿಹಿತೋ ಮೃತ್ಯು: ಕರ್ತವ್ಯೋ ಧರ್ಮ ಸಂಗ್ರಹ:ll
ಧರ್ಮಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಹಾಗೆ, ಪಿತೃದೇವತೆಗಳಿಗೆ ಪಿಂಡಪ್ರದಾನ, ತರ್ಪಣ, ಮಾಡುವುದರಿಂದ ಆ ವ್ಯಕ್ತಿಗೆ ದೀರ್ಘಾಯಸ್ಸು, ಯಶಸ್ಸು,ಧನ,ಪುತ್ರ ಸುಖ,-ಸಂಪತ್ತು ಇವೆಲ್ಲವೂ ಪಿತೃಗಳ ಆಶೀರ್ವಾದದೊಂದಿಗೆ ಲಭ್ಯವಾಗುತ್ತದೆ.
ಪ್ರತಿ ಸಂವತ್ಸರದಲ್ಲಿ ಭಾದ್ರಪದ ಕೃಷ್ಣ ಪಕ್ಷವನ್ನು ಪಿತೃಪಕ್ಷ ವೆಂದು ತಿಳಿದಿದ್ದೇವೆ .. 15 ದಿನಗಳ ಕಾಲ ಪಿತೃ ಪಕ್ಷವನ್ನುಆಚರಿಸಬೇಕಾದ ಈ ದಿನಗಳನ್ನು ಪಕ್ಷ ಮಾಸಾ ಎಂದು ಕೂಡ ಕರೆಯುತ್ತಾರೆ ಈ ಪಕ್ಷ ಮಾಸದ ಕೊನೆಯ ದಿನವಾದಂತ ಅಕ್ಟೋಬರ್ 2ರಂದು ಮಹಾಲಯ ಅಮಾವಾಸ್ಯೆ. 15 ದಿನಗಳಲ್ಲಿ ಆಚರಿಸದಿದ್ದರೂ ಕೂಡ ಈ ಮಹಾಲಯ ಅಮಾವಾಸ್ಯೆ ಯಂದು ಪಿತೃಪಕ್ಷದ ಪಿತೃ ಕಾರ್ಯಗಳನ್ನು ಬ್ರಾಹ್ಮಣ ಭೋಜನಗಳನ್ನು ತಿಲ ಹೋಮ ಪಿಂಡ ಪ್ರಧಾನವನ್ನು ಅಂದು ಮಾಡಬಹುದು.
ಏತಕ್ಕಾಗಿ ಪಿತೃಗಳಿಗೆ ಪಿತೃಪಕ್ಷದಲ್ಲಿ ಈ ರೀತಿಯಾದ ಮನ್ನಣೆ ಕೊಡಬೇಕು? ಇದರಿಂದ ಏನು ಪ್ರಯೋಜನ? ತರ್ಪಣ ಕೊಡದಿದ್ದರೆ ಏನಾಗುತ್ತದೆ?ಸತ್ತಂತ ವ್ಯಕ್ತಿಗಳ ಆತ್ಮದಿಂದ ಏನು ತೊಂದರೆ?ಎಂಬ ಜಿಜ್ಞಾಸೆ ಬಹಳ ಜನರಲ್ಲಿ ಮೂಡುವುದು ಇಂದಿನ ಕಾಲದಲ್ಲಿ ಸಹಜವಾಗಿದೆ..
ಸನಾತನ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರಿಗೂ ಪಂಚ ಯಜ್ಞಗಳನ್ನು ಶಾಸ್ತ್ರದಲ್ಲಿ ಹೇಳುತ್ತದೆ…
ಅದೆಂದರೆ. ಆಹುತ ಯಜ್ಞ : ಅಂದರೆ ನಿತ್ಯವೂ ಜಪಗಳನ್ನು ಮಾಡುವುದು..
ಹುತಯಜ್ಞ :ವೈಶ್ವದೇವ ಯಜ್ಞವನ್ನು ಮಾಡುವುದು. ಪ್ರಹೂತ ಯಜ್ಞ :ಅಂದರೆ ಭೂತ ಬಲಿಯನ್ನು ಕೊಡುವುದು.
ಬ್ರಾಹ್ಮ್ಯುಹುತ ಯಜ್ಞ: ಅಂದರೆ ಬ್ರಾಹ್ಮಣ ಸತ್ಕಾರ ಅಥವಾ ಅತಿಥಿ ಸತ್ಕಾರ ಮಾಡುವುದು.
ಪ್ರಾಶಿತ ಯಜ್ಞ:ಅಂದರೆ ಪಿತೃ ದೇವತೆಗಳಿಗೆ ತರ್ಪಣ ಅಥವಾ ಶ್ರಾದ್ಧವನ್ನು ಮಾಡುವ ಯಜ್ಞ ಎಂದರ್ಥ..
ಪ್ರತಿನಿತ್ಯವೂ ಪ್ರಾಶಿತ ಯಜ್ಞ ಅಂದರೆ ಪಿತೃಗಳಿಗೆ ತರ್ಪಣವನ್ನು ನೀಡಬೇಕು ಎಂಬುದು,ಮನುಸ್ಮೃತಿ ಮತ್ತು ಮಹಾಭಾರತದಲ್ಲಿ ಉಲ್ಲೇಖವಾಗಿದೆ..
ದೇವತೆಗಳಿಗೆ ನೀಡುವ ಹವಿಸ್ಸನ್ನು #ಹವ್ಯ ವೆಂದು, ಪಿತೃಗಳಿಗೆ ನೀಡುವ ಅನ್ನ ಪಿಂಡವನ್ನು #ಕವ್ಯ ವೆಂದು ಕರೆಯುತ್ತಾರೆ..
ಪ್ರತಿ ವ್ಯಕ್ತಿಗೂ ಮಕ್ಕಳಾಗುವುದು ಅದರಲ್ಲೂ ಗಂಡು ಮಕ್ಕಳಾಗುವುದು, ಪುಣ್ಯದಫಲವಾಗಿರುತ್ತದೆ. ಯಾವ ವ್ಯಕ್ತಿಗೆ ಗಂಡು ಮಕ್ಕಳಾಗುತ್ತದೆಯೋ, ರೀತಿಯ ವ್ಯಕ್ತಿಯ ಕುಟುಂಬದ ಮೇಲೆ ಪಿತೃಗಳ ವಿಶೇಷ ಪ್ರೀತಿ ಇರುತ್ತದೆ ಎಂದು, ಸ್ಮೃತಿಗಳಲ್ಲಿ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖವಾಗಿವೆ.ಪಿತೃಗಳನ್ನು ಸಂತೃಪ್ತಿ ಪಡಿಸುವುದು ಗಂಡುಮಕ್ಕಳ ಆದ್ಯ ಕರ್ತವ್ಯ..
ಆಯು:ಪುತ್ರನ್ ಯಶ:ಸ್ವರ್ಗ ಕೀರ್ತಿ ಪುಷ್ಟಿ ಬಲoಯಿಮl
ಪಶೂನ್ ಸೌಖ್ಯಂ ಧನಂ ಧಾನ್ಯಂ ಪ್ರಾಪ್ನೂಯಾತ್ ll
ಪಿತೃ ಪೂಜೆಯಿಂದ ಆಯಸ್ಸು,ಮಕ್ಕಳು, ಯಶಸ್ಸು, ಸ್ವರ್ಗ,ಕೀರ್ತಿ,ಬಲ,ಧನ, ಧಾನ್ಯ,ಸುಖ ಇವೆಲ್ಲ ಸಿಗುತ್ತದೆ.
ಆದರೆ ಇಂದಿನ ಕಾಲದಲ್ಲಿ ತಂದೆ ತಾಯಂದಿರನ್ನು ಬದುಕಿದ್ದಾಗಲೂ ಸರಿಯಾಗಿ ನೋಡಿ ಕೊಂಡಿರುವುದಿಲ್ಲ.ಸತ್ತಮೇಲೆ ಏನನ್ನು ಮಾಡುವುದಿಲ್ಲ.
ಜಾತಿ ಪಂಥಗಳ ವ್ಯತ್ಯಾಸವಿಲ್ಲದೆ ಪ್ರತಿ ಮನುಷ್ಯನಿಗೂ ಪ್ರಧಾನವಾಗಿ ಮೂರು ಋಣಗಳನ್ನು ಶಾಸ್ತ್ರದಲ್ಲಿ ತಿಳಿಸಿದೆ..
ಮೊದಲನೆಯದು ದೇವಋಣ, ದ್ವಿತೀಯ ವಾಗಿ ಋಷಿಋಣ,ಮೂರನೆಯದಾಗಿ ಪಿತೃಋಣವನ್ನು ತಿಳಿಸಿರುತ್ತದೆ.
ದೇವಋಣವನ್ನು ದೇವರಿಗೆ ಪೂಜೆ ಮಾಡುವುದರಿಂದ, ವ್ರತವನ್ನು ಆಚರಿಸುವುದರಿಂದ, ದೇವರನ್ನು ಸಂತೃಪ್ತಿಪಡಿಸಬಹುದಾಗಿದೆ..
ಋಷಿ ಋಣವನ್ನು,,ಋಷಿಗಳಿಗೆ ತರ್ಪಣ ಕೊಡುವ ಮೂಲಕ ತೀರಿಸಬಹುದಾಗಿದೆ..ಆದರೇ ಪಿತೃಋಣವನ್ನು ಪಿತೃ ದೇವತೆಗಳಿಗೆ ತರ್ಪಣ, ಬ್ರಾಹ್ಮಣ ಭೋಜನಗಳಿಂದ ಮಾತ್ರ ತೀರಿಸಲು ಸಾಧ್ಯವಾಗುತ್ತದೆ…
ದೇವ ಮತ್ತು ಋಷಿ ಋಣಗಳಿಂದ ನಾವು ಕರ್ತವ್ಯ ವಿಮುಖರಾದರೂ ಸಹ, ಅವರ ಕೋಪ ಗಳಿಗೆ ನಾವು ತುತ್ತಾಗುವುದಿಲ್ಲ.ಆದರೆ ಪಿತೃಋಣವನ್ನು ತೀರಿಸದಿದ್ದರೆ, ಅವರ ಕೋಪಕ್ಕೆ ಗುರಿಯಾಗುತ್ತೇವೆ, ಮತ್ತು ಅದರಿಂದ ಹೊರಬರಲು ಬಹಳ ಕಷ್ಟ ಪಡಬೇಕಾಗುತ್ತದೆ..
ವೇದಗಳಲ್ಲಿ ದೇವಯಾನ ಮತ್ತು ಪಿತೃಯಾನ ಎಂಬ ಎರಡು ಕರ್ಮ ಗತಿಗಳನ್ನು ತಿಳಿಸುತ್ತದೆ. ದೇವತೋಪಾಸಾಕನು ದೇವಲೋಕಕ್ಕೆ ಹೋಗಿ, ಅಲ್ಲಿ ದೇವರ ಸಾಯುಜ್ಯ ಪಡೆದರೆ,ಕರ್ಮಿಗಳು ಪಿತೃ ಲೋಕಕ್ಕೆ ಹೋಗಿ ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾರೆ…
“ಶ್ರದ್ಧಾಯಾo ಇತಿ ಶ್ರಾದ್ಧ:” ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ.ಪಿತೃ ಗಳಿಗೆ ಕೇವಲ ಎಳ್ಳು ಮತ್ತು ನೀರನ್ನು ಶ್ರದ್ಧೆಯಿಂದ ಸಮರ್ಪಣೆ ಮಾಡಿದರೆ ಸಾಕು…
ತರ್ಪಣ ಭೋಜನ ಪಿತೃಗಳಿಗೆ ಹೇಗೆ ಸೇರುತ್ತದೆ.?
ಕೆಲವರು ಸನಾತನ ಸಂಸ್ಕೃತಿಯ ಆಚರಣೆಗಳನ್ನು ಕುಚೋದ್ಯ ಮಾಡುವುದು ರೂಢಿಯಾಗಿದೆ. ಪಿತೃ ಲೋಕದಲ್ಲಿರುವ ಪಿತೃಗಳಿಗೆ ಭೂಲೋಕದಲ್ಲಿ ನೀಡುವ ತರ್ಪಣ,ಪಿಂಡಪ್ರದಾನ, ಬ್ರಾಹ್ಮಣರಿಗೆ ಊಟ ಹಾಕಿದರೆ, ಅದು ಹೇಗೆ ಮುಟ್ಟುತ್ತದೆ. ಪಿತೃಗಳು ಬೇರೊಂದು ಜನ್ಮವನ್ನು ಪಡೆದಿದ್ದರೆ ಇದರ ಪ್ರಯೋಜನವೇನು? ಈ ರೀತಿಯಾದ ಹಲವಾರು ಪ್ರಶ್ನೆಗಳು ಕೆಲವರಲ್ಲಿ ಉದ್ಭವಿಸುತ್ತದೆ ಮತ್ತು ಇದು ಜಿಜ್ಞಾಸೆಯೂ ಸಹ..
ಈ ರೀತಿಯಾದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದು ಬಹಳ ಕಷ್ಟವೇನಲ್ಲ. ಏಕೆಂದರೆ ನಮ್ಮ ಪೂರ್ವಿಕರು ಒಬ್ಬೊಬ್ಬರು ಹತ್ತು-ಹದಿನೈದು ವಿಜ್ಞಾನಿಗಳಿಗೆ ಸಮನಾಗಿದ್ದಾರೆ.ನಮ್ಮ ಸನಾತನ ಧರ್ಮದ ಪ್ರತಿಯೊಂದು ನಡೆಯೂ ಸಹ ವೈಜ್ಞಾನಿಕವಾಗಿಯೇ ಇರುತ್ತದೆ.ಅದೇ ರೀತಿ ನಮ್ಮ ಪಿತೃಗಳು ಸೂಕ್ಷ್ಮ ರೂಪದಲ್ಲಿ ಇರುತ್ತಾರೆ. ಆದ್ದರಿಂದ ಇವರಿಗೆ ಅತಿ ಸೂಕ್ಷ್ಮವಾದ ಆಹಾರವೇ ಬೇಕಾಗುತ್ತದೆ.
ನಾವು ಹೋಮದಲ್ಲಿ ಸಮರ್ಪಿಸುವ ಹವಿಸ್ಸು, ದೇವತೆಗಳಿಗೆ ಮತ್ತು ಪಿತೃಗಳಿಗೆ ಅಗ್ನಿದೇವನು ಸೂಕ್ಷ್ಮ ಸ್ವರೂಪವನ್ನಾಗಿಸಿ ನೀಡುತ್ತಾನೆ..ಇದನ್ನು ಸೂರ್ಯನು ಸೆಳೆದುಕೊಂಡು,ಅದನ್ನು ಅತಿ ಸೂಕ್ಷ್ಮವಾಗಿಸಿ ಪಿತೃಗಳಿಗೆ ನೀಡುತ್ತಾನೆ. ಆದ್ದರಿಂದಲೇ ಸೂರ್ಯನು ಪಿತೃಕಾರಕನಾಗಿದ್ದಾನೆ. ಇನ್ನು ಬ್ರಾಹ್ಮಣರು ಮಾಡಿದ ಅಥವಾ ಭೋಜನವು ಹೇಗೆ ಪಿತೃಗಳಿಗೆಸೇರುತ್ತದೆ?.
ಮನುಸ್ಮೃತಿಯಲ್ಲಿ ತಿಳಿಸಿರುವ ಹಾಗೆ,
“ವಿದ್ಯಾತಪ: ಸಮೃದ್ದೇಶು ಹುತo ವಿಪ್ರ ಮುಖಾಗ್ನಿಶು” ಜ್ಞಾನದಿಂದ ವೃದ್ಧ
ನಾಗಿರುವ,ತಪ:ಶಕ್ತಿಯಿಂದ ವೃದ್ಧ ನಾಗಿರುವ, ಅನುಷ್ಠಾನ ಯುಕ್ತವಾದ ಬ್ರಾಹ್ಮಣರಿಗೆ ಮಾತ್ರ ಪಿತೃಕಾರ್ಯ ನಿಮಿತ್ತ ಭೋಜನವನ್ನು ಅರ್ಪಿಸಬೇಕು.
ಇವರ ಉದರಾಗ್ನಿಯಲ್ಲಿ ವೈಶ್ವಾನರ ಎಂಬ ಅಗ್ನಿಯ ಮೂಲಕ ಅನ್ನದ ಶಕ್ತಿಯನ್ನು ಸೂರ್ಯನ# ಸುಶುಮ್ನಾ ಕಿರಣಗಳ ಮೂಲಕ ಸೂಕ್ಷ್ಮ ರೂಪಿಯಾದ ಪಿತೃಗಳು ಸೆಳೆದುಕೊಳ್ಳುತ್ತಾರೆ ..ಆದ್ದರಿಂದಲೇ, ಯಜ್ಞಗಳನ್ನು ಮಾಡುವಾಗ ಬರೀ ಕೆಂಡದ ಮೇಲೆ ಅಥವಾ ಬೂದಿಯ ಮೇಲೆ ಹವಿಸ್ಸನ್ನು ನೀಡಬಾರದು ಎಂಬ ಸತ್ಯವನ್ನು ನಮ್ಮ ಪೂರ್ವಿಕರು ಸಹಸ್ರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು..ಆದ್ದರಿಂದಲೇ ಹವಿಸ್ಸು ಗಳನ್ನು ಅಗ್ನಿ ಜ್ವಾಲೆಯಲ್ಲಿ ಯೇ ನೀಡಬೇಕೆಂಬುದು ಶಾಸ್ತ್ರವಾಗಿದೆ. ಅಹಂಕಾರದಿಂದಾಗಲಿ,ಲೋಭದಿಂದಾಗಲಿ, ಕೋಪದಿಂದಾಗಲಿ, ಅಶಾಂತಿಯಿಂದಾಗಲಿ ಮಾಡಿದಂತಹ ಪಿತೃಕಾರ್ಯ ಅವರಿಗೆ ತಲುಪುವುದಿಲ್ಲ ಎಂಬುವುದು ಮಹಾಭಾರತದಲ್ಲಿ ಭೀಷ್ಮ ಪಿತಾಮಹನು ಧರ್ಮರಾಯನಿಗೆ ತಿಳಿಸುತ್ತಾನೆ…
,#ಅಮಾವಾಸ್ಯೆಯ ಪ್ರಾಮುಖ್ಯತೆ:: ನಮ್ಮ ಪಿತೃಗಳ ಲೋಕವು ಚಂದ್ರಲೋಕದ ಹಿಂಭಾಗದಲ್ಲಿದೆ. ಶುಕ್ಲಪಕ್ಷದಲ್ಲಿ ಸೂರ್ಯನಿಂದ ಚಂದ್ರನು ದೂರವಾಗುತ್ತಾನೆ, ಮತ್ತು ಕೃಷ್ಣಪಕ್ಷದಲ್ಲಿ ಹತ್ತಿರವಾಗಿ ಅಮಾವಾಸ್ಯೆಯ ದಿನ ಸೂರ್ಯ ಚಂದ್ರ ಮತ್ತು ಪೃಥ್ವಿ ಮೂವರು ಒಂದೇ ಸರಳರೇಖೆಯಲ್ಲಿ ಬರುತ್ತಾರೆ. ಆಗ ಪಿತೃ ಲೋಕಕ್ಕೆ ಮಧ್ಯಾಹ್ನ ವಾಗಿರುವುದರಿಂದ ತರ್ಪಣವನ್ನು, ಸಾಧ್ಯವಾದರೆ ಬ್ರಾಹ್ಮಣ ಭೋಜನವನ್ನು ಮಾಡಿದರೆ,ಪಿತೃಗಳಿಗೆ ಆಹಾರ ಮತ್ತು ನೀರನ್ನು ನೀಡಿದಂತಾಗುತ್ತದೆ.
ಬ್ರಾಹ್ಮಣ ಭೋಜನವನ್ನು ಮಾಡಿಸುವುದರಿಂದ ಅದೂ ಸಹ ಪಿತೃಗಳಿಗೆ ಸೇರುತ್ತದೆ.ನಾವು ಪಿತಾಮಹ ಪ್ರಪಿತಾಮಹ ರನ್ನು ಅನುಕ್ರಮವಾಗಿ ವಸು, ರುದ್ರ, ಆದಿತ್ಯ ಸ್ವರೂಪದಲ್ಲಿ ಕಲ್ಪಿಸಿಕೊಳ್ಳುತ್ತೇವೆ. ನಾವು ನಮ್ಮ ಪಿತೃಗಳಿಗೆ ನೀಡುವ ಕವ್ಯ( ಅನ್ನ ಪಿಂಡ)ವನ್ನು ವಸು ರುದ್ರ ಆದಿತ್ಯರು ಆಯಾ ಪಿತೃಗಳಿಗೆ ತಲುಪಿಸುತ್ತಾರೆ….
#ಜಾತಕಗಳಲ್ಲಿ ಪಿತೃ ದೋಷ ಗಳು:: ಪಿತೃ ಯಜ್ಞವನ್ನು ಸರಿಯಾಗಿ ಮಾಡದಿದ್ದಲ್ಲಿ ಗರುಡ ಪುರಾಣ, ಮಹಾಭಾರತ,ಮನುಸ್ಪೃತಿ,ಯಜ್ಞವಲ್ಕಸ್ಪೃತಿ, ಮುಂತಾದ ಮಹಾ ಗ್ರಂಥಗಳಲ್ಲಿ ಏನಾಗಬಹುದೆಂದು ಉಲ್ಲೇಖಿಸಿದ್ದಾರೆ.
ವರಾಹಮಿಹಿರರು ತಮ್ಮ ಬೃಹಜ್ಜಾತಕದಲ್ಲಿ ಈ ರೀತಿಯಾಗಿ ಹೇಳಿದ್ದಾರೆ. ಯಾರು ಶ್ರಾದ್ಧ ಅಥವಾ ತರ್ಪಣಗಳನ್ನು ನೀಡುವುದಿಲ್ಲವೋ, ಅವರ ವಂಶವನ್ನು ಪಿತೃಗಳು ಕೊನೆಗೊಳಿಸುತ್ತಾರೆ.ಅಂದರೆ #ಸುತಕ್ಷಯ ಅಂದರೆ,, ಗಂಡುಮಕ್ಕಳ ಸಂತತಿಯನ್ನು ಕ್ಷಯಿಸುತ್ತಾರೆ. ಶುಭಕಾರ್ಯಗಳಿಗೆ ತಡೆಯೋಡ್ಡುತ್ತಾರೆ. ಗರ್ಭದಲ್ಲಿರುವ ಮಕ್ಕಳ ಶಕ್ತಿಯನ್ನು ಅಪಹರಿಸಿ ಅವರ ಅಂಗವಿಕಲತೆಗೆ ಕಾರಣರಾಗುತ್ತಾರೆ..
#ಪಿತೃಶಾಪ ನಿವಾರಣೆಗೆ ಪರಿಹಾರ:: ಇದಕ್ಕೆ ಪರಿಹಾರವಾಗಿ ಗಯಾದಲ್ಲಿ ಶ್ರಾದ್ಧ ಮಾಡಿ,ಪ್ರಾಯಶ್ಚಿತ್ತ ಮಾಡಿಕೊಂಡು, ಬ್ರಾಹ್ಮಣರಿಗೆ ಭೋಜನ ಮಾಡಿಸಿ ವಸ್ತ್ರದಾನವನ್ನು ಮಾಡಬೇಕು ಅಲ್ಲದೆ ಪ್ರತಿವರ್ಷವೂ ಶ್ರಾದ್ಧವನ್ನು ಮಾಡಬೇಕು.
ಸೇತು ಸಮುದ್ರದಲ್ಲಿ( ರಾಮೇಶ್ವರದ ಬಳಿ ಇರುವ ಧನುಷ್ಕೋಟಿ ಯಲ್ಲ ) ಒಮ್ಮೆಯಾದರೂ ಪಿತೃಗಳನ್ನು ನೆನೆದು ತರ್ಪಣವನ್ನು ನೀಡುವುದರಿಂದ,ಅಥವಾ ಅಲ್ಲಿ ತಿಲ ಹೋಮವನ್ನು ಮಾಡುವುದರಿಂದ ಎಲ್ಲಾ ದೋಷಗಳು ಮುಕ್ತಿ ಯಾಗುವುದು ಎಂಬುದು ಮಹಾಭಾರತದಲ್ಲಿ ಉಲ್ಲೇಖವಾಗಿದೆ…
ಜಾತಿ ಭೇದಗಳಿಲ್ಲದೇ ಪಿತೃಯಜ್ಞವನ್ನು ಆಚರಿಸುವವರು ಮಾಡಬೇಕಾದ ಪ್ರಮುಖ ಕಾರ್ಯಗಳು::
ಆದಷ್ಟು ಶ್ರಾದ್ಧ
ಕರ್ಮಗಳನ್ನು ಅಥವಾ ಪಿತೃಯಜ್ಞ ಗಳನ್ನು ಸ್ವಗೃಹದಲ್ಲೇ ಆಚರಿಸಿದರೆ ಉತ್ತಮ ಫಲ,,,,
ಪಿತೃಯಜ್ಞದ ದಿನ ಬ್ರಾಹ್ಮಣರಿಗೆ ಭೋಜನ ಅಥವಾ ಸ್ವಯಂ ಪಾಕ ನೀಡುವವರೆಗೂ ಬೇರೆ ಯಾವುದೇ ದಾನವನ್ನು ಮಾಡಬಾರದು..
ಜಗಳ ಕದನ ಚರ್ಚೆಗಳಿಲ್ಲದೆ ಶಾಂತರೀತಿಯಿಂದ ಶ್ರದ್ಧೆಯಿಂದ ಪಿತೃಯಜ್ಞ ಗಳನ್ನು ಅಂದರೆ ಶ್ರಾದ್ಧಗಳನ್ನು ಮಾಡಬೇಕು..
ಸಂಸಾರಿಯಾಗಿ ಇದ್ದರೆ, ಆ ದಿನ ಬ್ರಹ್ಮ ಚರ್ಯ ಪಾಲನೆಯನ್ನು ಕಡ್ಡಾಯವಾಗಿ ಮಾಡಬೇಕು..
ಶಕ್ಯವಿರುವ ಮತ್ತು ಲಭ್ಯವಿರುವ ದ್ರವ್ಯಗಳಿಂದ ಶ್ರದ್ಧೆಯಿಂದ ಶ್ರಾದ್ದವನ್ನು ಆಚರಿಸಬೇಕು.
ಪಿತೃಗಳ ಯಜ್ಞದಲ್ಲಿ ದಾನವನ್ನು ಅಪಾತ್ರರಿಗೆ ನೀಡಬಾರದು..
ಆಡಂಬರದ ಆಚರಣೆಗಿಂತಲೂ ಶ್ರದ್ಧೆಯಿಂದ ಕೇವಲ ಒಬ್ಬರಿಗೆ ನೀಡಿದ ದಾನ ಫಲವು ಅಖಂಡವಾಗಿರುತ್ತದೆ
ನಂಬಿಕೆಯಿಂದ ಶ್ರದ್ಧೆಯಿಂದ ಆತುರವಿಲ್ಲದೆ ಪಿತೃಗಳಿಗೆ ತರ್ಪಣವನ್ನು ನೀಡಬೇಕು..
ಶ್ರಾದ್ಧವನ್ನು ಮಾಡಬೇಕಾದರೆ,ಕಣ್ಣೀರು ಹಾಕಿಕೊಂಡು,ಅಥವಾ ಶಬ್ದವನ್ನು ಮಾಡುತ್ತಿದ್ದರೆ, ಅದರ ಶಕ್ತಿಗಳು ಶತ್ರುಗಳ ಪಾಲಾಗುತ್ತದೆ..
ಸುಳ್ಳು ಹೇಳಿ ಶಾದ್ದ ಮಾಡಿದರೆ ಅದರ ಫಲ ನಾಯಿಗಳಿಗೆ ಸೇರುತ್ತದೆ..
ಶ್ರಾದ್ಧದ ದಿನ ಆದಷ್ಟು ಮನೆಯಲ್ಲಿ ನಿಶಬ್ದವಾಗಿರುವುದು, ಪಿತೃದೇವತೆಗಳಿಗೆ ಸಂತೋಷವನ್ನು ತರುತ್ತದೆ..
ತಾನು ಕಷ್ಟದಲ್ಲಿದ್ದರೂ ಸಹ ಪಿತೃ ನಿಮಿತ್ತ ಕಾರ್ಯಗಳನ್ನು ಸಂತೋಷವಾಗಿ ಮಾಡಿದರೆ ಪಿತೃಗಳು ಅವರನ್ನು ಅಖಂಡವಾಗಿ ಆಶೀರ್ವದಿಸುತ್ತಾರೆ.