ಆಕೆ ಬಣ್ಣದ ಲೋಕದ ಕನಸು ಕಂಡು ಬೆಂಗಳೂರಿಗೆ ಬಂದಿದ್ದಳು. ಅಲ್ಲೊಂದು ಇಲ್ಲೊಂದು ಸೀರಿಯಲ್ ಗಳಲ್ಲಿ ನಟಿಸುವುದರ ಜೊತೆಗೆ ಸಣ್ಣ ಪುಟ್ಟ ಜಾಹೀರಾತುಗಳಲ್ಲೂ ನಟನೆ ಮಾಡುತ್ತಿದ್ದಳು. ಆದರೆ ಆಕೆಯ ಹಿಂದೆ ಪ್ರೀತ್ಸೆ ಪ್ರೀತ್ಸೆ ಅಂತ ಬಿದ್ದಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ,
ಯುವತಿಯ ಕಾಟಕ್ಕೆ ಮಗ ಸತ್ತಿದ್ದಾನೆ ಎಂದು ಯುವಕನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಸದ್ಯ ಮೃತ ಯುವಕನ ತಾಯಿ ದೂರಿನ ಮೇರೆಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ನಟಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
ಪಿಳ್ಳಹಾನಹಳ್ಳಿ ನಿವಾಸಿ ಮದನ್ (25) ಎಂಬಾತ ಇವೆಂಟ್ ಮ್ಯಾನೆಜ್ಮೆಂಟ್ ಕೆಲಸ ಮಾಡಿಕೊಂಡಿದ್ದ. ಈತ ನಟಿ 24 ವರ್ಷದ ವೀಣಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ವೀಣಾ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಜನನಿ’ ಎಂಬ ಧಾರವಾಹಿ ಸೇರಿದಂತೆ ಬೇರೆ ಬೇರೆ ಸೀರಿಯಲ್ನಲ್ಲಿ ನಟಿಸಿದ್ದಳು.
ಬೆಂಗಳೂರಿನ ಸಿ.ಕೆ ಪಾಳ್ಯ ರಸ್ತೆಯಲ್ಲಿರುವ ಸಾಯಿ ಸಮೃದ್ಧಿ ಲೇಔಟ್ನಲ್ಲಿರುವ ಮನೆಯಲ್ಲಿ ವೀಣಾ ಒಂಟಿಯಾಗಿ ವಾಸವಿದ್ದಳು. ಒಂದು ವರ್ಷದ ಹಿಂದೆ ಮದನ್ ಪರಿಚಯವಾಗಿದ್ದಳು. ಅದೇ ಪರಿಚಯ ಸ್ನೇಹವಾಗಿ ಬೆಳೆದಿದ್ದು, ವೀಣಾ, ಮದನ್ನನ್ನ ಪ್ರೀತಿಸುವಂತೆ ಕಿರುಕುಳ ಕೊಟ್ಟು ಆಗಾಗ ಮನೆಗೆ ಬರುವಂತೆ ಒತ್ತಾಯ ಮಾಡುತ್ತಿದ್ದಳಂತೆ. ವೀಣಾ ಎಷ್ಟೇ ಒತ್ತಾಯಿಸಿದ್ರೂ ಮದನ್ ಇಷ್ಟವಿಲ್ಲ ಎಂದು ಹೇಳಿದ್ದ. ಹಾಗಾಗಿ ಮಾನ ಹರಾಜು ಹಾಕ್ತೀನಿ ಎಂದು ವೀಣಾ ಬೆದರಿಕೆ ಹಾಕುತ್ತಿದ್ದಳು. ಮನೆ ಬಳಿ ಬಂದು ರಂಪಾಟ ಮಾಡುತ್ತಿದ್ದಳಂತೆ. ಜೊತೆಗೆ ಬ್ಲೇಡ್ನಿಂದ ಕೈ ಕೊಯ್ದುಕೊಳ್ಳುತ್ತಿದ್ದಳಂತೆ.
ಅಕ್ಟೋಬರ್ 1 ರಂದು ನಾಲ್ಕು ಗಂಟೆಗೆ ವೀಣಾ, ಮದನ್ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಕುಡಿದು ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಅದೇ ಕಿರುಕುಳಕ್ಕೆ ಬೇಸತ್ತ ಮದನ್ ರೂಮ್ನಲ್ಲಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಹುಳಿಮಾವು ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಬಿಳೇಕಹಳ್ಳಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಮದನ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತನಿಖೆ ಬಳಿಕ ಮದನ್ ಸಾವಿನ ಅಸಲಿ ಕಾರಣ ಗೊತ್ತಾಗಲಿದೆ.
ಮದನ್ ತಾಯಿ ದೂರಿನ ಮೇಲೆ ಎಫ್ಐಆರ್ ದಾಖಲಾಗಿದ್ದರೆ, ಜೊತೆಗೆ ವೀಣಾ ಮೇಲೆ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ.